Banner Ad

ಸುದ್ದಿ ಕನ್ನಡ ವಾರ್ತೆ

ದಾಂಡೇಲಿ:ನಗರದ ತಾಯಿ ಮತ್ತು ಮಕ್ಕಳ ಆರೈಕೆಯ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಬಡವರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನಲೆಯಲ್ಲಿ ನಗರದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ವೈದ್ಯರ ವಿರುದ್ಧ ಶಾಸಕರಾದ ಆರ್.ವಿ.ದೇಶಪಾಂಡೆಯವರು ಗರಂ ಆದ ಘಟನೆ ಶುಕ್ರವಾರ ನಡೆದಿದೆ.

Banner Ad

ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಆರ್.ವಿ ದೇಶಪಾಂಡೆ ಆಸ್ಪತ್ರೆಯ ಸೌಲಭ್ಯಗಳು, ಸೇವಾ ಗುಣಮಟ್ಟ, ಔಷಧಿಗಳ ಲಭ್ಯತೆ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಬಗ್ಗೆ ವಿಷಯ ಪ್ರಸ್ತಾಪ ವಾಗುತ್ತಿದ್ದಂತೆಯೇ ಹೆರಿಗೆ ಹಾಗೂ ಸಿಜೇರಿಯನ್ ಬಳಿಕ ಬಡ ರೋಗಿಗಳಿಂದ 15 ರಿಂದ 20 ಸಾವಿರ ರೂಪಾಯಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪದ ಕುರಿತಂತೆ ಬಗ್ಗೆ ಅಖಿಲ ಕಿತ್ತೂರ ಹಾಗೂ ಡಾ. ಕೀರ್ತಿ ಸಾಳುಂಕೆ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಅವರ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಾ.ಅಖಿಲ್ ಕಿತ್ತೂರು ಅವರು ನಾವು ಹಣ ಕೇಳಿ ಪಡೆಯುತ್ತಿಲ್ಲ, ಹಣ ಕೊಟ್ಟಲ್ಲಿ ಮಾತ್ರ ಸ್ವೀಕರಿಸುತ್ತೇವೆ ಎಂದಾಗ ಆರ್ ವಿ ದೇಶಪಾಂಡೆ ಅವರು ಮತ್ತಷ್ಟು ಗರಂ ಆಗಿ ತೀವ್ರ ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಯಾರಿಂದಾದರೂ ಹಣ ಸ್ವೀಕರಿಸಿದ್ದು ಕಂಡುಬಂದಲ್ಲಿ ಪೊಲೀಸ್ ದೂರು ದಾಖಲಿಸುವುದಾಗಿ ಖಡಕ್ ಎಚ್ಚರಿಕೆಯನ್ನು ನೀಡಿದ ದೇಶಪಾಂಡೆಅವರು ಈವರೆಗೆ ಹಣ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ತಹಶೀಲ್ದಾರರಿಗೆ ಸೂಚನೆ ನೀಡಿ, ಬಡವರ ಹತ್ತಿರ ಸುಲಿಗೆ ಮಾಡಿದರೆ ಹುಷಾರ್ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಶಿವಪ್ಪ ನಾಯ್ಕ. ರಫೀಕ್ ಖಾನ್, ರೇಣುಕಾ ಬಂದಂ, ಪ್ರತಾಪ್ ಸಿಂಗ್ ರಜಪೂತ್, ತಹಶೀಲ್ದಾರ್ ಶೈಲೇಶ ಪರಮಾನಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಟಿ.ಸಿ.ಹಾದಿಮನಿ, ಪೌರಾಯುಕ್ತ ವಿವೇಕ ಬನ್ನೆ, ಭೂಷಣ್ ಕರಡಿಗುಡ್ಡ ಮೊದಲಾದವರು ಮತ್ತು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಉತ್ಪಲ್ ಶಿರೋಡ್ಕರ್ ಸ್ವಾಗತಿಸಿ, ವಂದಿಸಿದರು.

Banner Ad