ಸುದ್ದಿ ಕನ್ನಡ ವಾರ್ತೆ
‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ವತಿಯಿಂದ ಪಣಜಿಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಯಿತು. ಮೇಲ್ನೋಟಕ್ಕೆ ಈ ಪ್ರತಿಭಟನೆಯು ‘ಎಸ್.ಐ.ಆರ್.’ ವಿರೋಧ ಹಾಗೂ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಲಾದಂತೆ ಕಂಡರೂ, ವಾಸ್ತವದಲ್ಲಿ ಅಲ್ಲಿ ಬಹಿರಂಗವಾಗಿ ‘ಹಿಂದೂವಾದ ಮುರ್ದಾಬಾದ್’ ಎಂದು ಘೋಷಣೆಗಳನ್ನು ಕೂಗಲಾಯಿತು. ಇದರಿಂದ ಪ್ರತಿಭಟನೆಯ ಹಿಂದಿರುವ ‘ಸಿಜೆಪಿ’ಯ ‘ಹಿಂದೂವಿರೋಧಿ ಕಾರ್ಯಸೂಚಿ’ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರತಿಭಟನೆಯ ಉದ್ದೇಶವು ಹಿಂದೂಗಳನ್ನು ಗುರಿಯಾಗಿಸುವುದು ಮತ್ತು ಶಾಂತಿಯುತ ಗೋವಾದ ಸಾಮಾಜಿಕ ಸೌಹಾರ್ದತೆಯನ್ನು ಕದಡುವುದೇ ಆಗಿತ್ತು. ಆದ್ದರಿಂದ ‘ಸಿಜೆಪಿ’ ಪ್ರತಿಭಟನೆಯ ಸೂತ್ರಧಾರಿ ಅಮರೀನ್ ಶೇಖ್ ಸೇರಿದಂತೆ ಎಲ್ಲ ಪ್ರತಿಭಟನಾಕಾರರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಗೋವಾ ರಾಜ್ಯ ಸಂಯೋಜಕರಾದ ಶ್ರೀ. ಸತ್ಯವಿಜಯ ನಾಯ್ಕ್ ಆಗ್ರಹಿಸಿದ್ದಾರೆ.
ಶ್ರೀ. ನಾಯ್ಕ್ ಅವರು ಮುಂದುವರಿದು ಮಾತನಾಡುತ್ತಾ, ಈ ಸಂಘಟನೆಯ ಪ್ರತಿಭಟನೆಗಳ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಅವರ ವೇದಿಕೆಯಿಂದ ನಿರಂತರವಾಗಿ ಹಿಂದೂವಿರೋಧಿ ಮತ್ತು ದೇಶವಿರೋಧಿ ನಿಲುವುಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಪಾಕಿಸ್ತಾನಿ ಕವಿ ಫೈಜ್ ಅಹ್ಮದ್ ಫೈಜ್ ಅವರ ಕವಿತೆಯನ್ನಾಧರಿಸಿದ ‘ಸಬ್ ತಾಜ್ ಉಛಾಲೇ ಜಾಯೇಂಗೆ, ಸಬ್ ತಖ್ತ್ ಗಿರಾಯೇ ಜಾಯೇಂಗೆ… ಬಸ್ ನಾಮ್ ರಹೇಗಾ ಅಲ್ಲಾಹ್ ಕಾ…’ ಎಂಬ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ಒಂದೆಡೆ ಪ್ರಭು ಶ್ರೀರಾಮ ಮತ್ತು ಹಿಂದೂವಾದದ ಮೇಲಿನ ದ್ವೇಷ, ಇನ್ನೊಂದೆಡೆ ಪಾಕಿಸ್ತಾನಿ ಕವಿ ಹಾಗೂ ‘ನಾಮ್ ರಹೇಗಾ ಅಲ್ಲಾಹ್ ಕಾ’ ಎಂಬ ಇಸ್ಲಾಮಿಕ್ ಪ್ರಚಾರ—ಇವುಗಳ ಮೂಲಕ ‘ಸಿಜೆಪಿ’ಯ ಮುಖವಾಡ ಕಳಚಿಬಿದ್ದಿದೆ. ಈ ಹಿಂದೆ ಗೋವಾದಲ್ಲೇ ‘ನೀಟ್ ಪರೀಕ್ಷೆ’ಗಳ ವಿರುದ್ಧ ಅಮರೀನ್ ಶೇಖ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ‘ಫ್ರೀ ಉಮರ್ ಖಾಲಿದ್’ ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿತ್ತು.
ಇದೇ ರೀತಿ ಹಲವೆಡೆ ‘ಸಿಜೆಪಿ’ಯ ಪ್ರತಿಭಟನೆಗಳಲ್ಲಿ ಹಿಂದೂವಿರೋಧ ಮತ್ತು ದೇಶದ್ರೋಹಿಗಳಿಗೆ ಬೆಂಬಲ ವ್ಯಕ್ತಪಡಿಸಲಾಗಿದೆ. ಇಂತಹ ಪ್ರತಿಭಟನೆಗಳಿಂದ ದೇಶದ ಸಾಮಾಜಿಕ ವಾತಾವರಣವನ್ನು ಹಾಳುಗೆಡವಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಳ್ಳಹಿಡಿಸಲಾಗುತ್ತಿದೆ. ಸಾಮಾಜಿಕ ವಿಷಯಗಳ ನೆಪವೊಡ್ಡಿ ದೇಶದ ಯುವಕರನ್ನು ಬಳಸಿಕೊಂಡು ಅರಾಜಕತೆ ಸೃಷ್ಟಿಸುವ ಕೆಲಸವನ್ನು ‘ಸಿಜೆಪಿ’ ಮಾಡುತ್ತಿದೆ. ‘ಸಿಜೆಪಿ’ ಎಂಬುದು ‘ಕಾಕ್ರೋಚ್ ಜನತಾ ಪಾರ್ಟಿ’ ಅಲ್ಲ, ಬದಲಿಗೆ ‘ಕಮ್ಯುನಿಸ್ಟ್ ಜನತಾ ಪಾರ್ಟಿ’ ಎಂಬುದು ಈಗ ಸ್ಪಷ್ಟವಾಗಿದೆ. ಆದ್ದರಿಂದ ಈ ಸಂಘಟನೆಯನ್ನು ದೇಶದ್ರೋಹಿ ಮತ್ತು ಹಿಂದೂದ್ರೋಹಿ ಎಂದು ಘೋಷಿಸಿ, ಅವರ ವಿರುದ್ಧ ತಕ್ಷಣವೇ ಕಠಿಣಾತಿಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
