Banner Ad

ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್‌ ಡಿಪೋ ಬಳಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮುಂಡಗೋಡ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಇಂದೂರು ಗ್ರಾಮದ ಕುನ್ನೂರ ಓಣಿಯ ನಿವಾಸಿ ಅಕ್ಷರ ಮೌಲಾಸಾಬ ಸೈಯದ್‌ಅಲಿ (32) ಎಂದು ಗುರುತಿಸಲಾಗಿದೆ. ಈತನು ಇಂದು ಬೆಳಿಗ್ಗೆ ಸುಮಾರು 11:54 ಗಂಟೆಗೆ ಶಿರಸಿ-ಹುಬ್ಬಳ್ಳಿ ಮಾರ್ಗದ ರಾಜ್ಯ ಹೆದ್ದಾರಿ-69ರ ಬಸ್‌ ಡಿಪೋ ಬಳಿ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.

Banner Ad

ದಾಳಿಯ ವೇಳೆ ಸುಮಾರು 12,000 ರೂ. ಮೌಲ್ಯದ 184 ಗ್ರಾಂ ಗಾಂಜಾ ಹಾಗೂ ಆರೋಪಿಯ ಬಳಿಯಿದ್ದ 360 ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಮ್. ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಶಿರಸಿ ಡಿ.ಎಸ್.ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಮುಂಡಗೋಡ ಪೊಲೀಸ್ ಇನ್ಸ್‌ಪೆಕ್ಟರ್ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ, ಪಿ.ಎಸ್.ಐ ಮಂಜುನಾಥ ಗೌಡರ, ಎ.ಎಸ್.ಐ ಸೋಮಶೇಖರ ಮೇತ್ರಿ ಹಾಗೂ ಸಿಬ್ಬಂದಿಗಳಾದ ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುಧೋಳ, ನಾಗಪ್ಪ ಮೊರಟಗಿ ಮತ್ತು ಬಸವರಾಜ ಒಡೆಯರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Banner Ad