ಸುದ್ದಿ ಕನ್ನಡ ವಾರ್ತೆ
ನವದೆಹಲಿ: ಕರ್ನಾಟಕದ ಪ್ರಕೃತಿ ಸಂಪತ್ತಿನ ಪ್ರಮುಖ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಸ್ತಿತ್ವಕ್ಕೆ ಮತ್ತಷ್ಟು ರಕ್ಷಣೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರದೇಶದ ಸುತ್ತಲಿನ 663.32 afcdd ಕಿಲೋಮೀಟರ್ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ಪರಿಸರ ಸೂಕ್ಷ್ಮ ವಲಯಗಳು ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತ ‘ಬಫರ್ ಜೋನ್’ ಅಥವಾ ‘ಶಾಕ್ ಅಬ್ದಾರ್ಬರ್’ಗಳಂತೆ ಕೆಲಸ ಮಾಡುತ್ತವೆ. ಇದರಿಂದಾಗಿ ಅರಣ್ಯದ ಅಂಚಿನಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳು ಹಾಗೂ ಮಾನವ ಹಸ್ತಕ್ಷೇಪಕ್ಕೆ ನಿಯಂತ್ರಣ ಬೀಳಲಿದ್ದು, ಕಾಡುಪ್ರಾಣಿಗಳ ಮುಕ್ತ ಸಂಚಾರಕ್ಕೆ ಮತ್ತು ಪರಿಸರ ಸಮತೋಲನಕ್ಕೆ ಹೆಚ್ಚಿನ ಒತ್ತು ಸಿಗಲಿದೆ.
ಎ. 2ರಂದು ಹೊರಡಿಸಲಾಗಿರುವ ಈ ಅಧಿಸೂಚನೆಯಲ್ಲಿ ಕಾಳಿ ಮೀಸಲು ಅರಣ್ಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲಾಗಿದೆ. ಕಾಳಿ ನದಿ ಹಾಗೂ ಅದರ ಉಪನದಿಗಳಾದ ನಾಗಝರಿ ಮತ್ತು ಕಾನೇರಿ ನದಿಗಳ ಪ್ರಮುಖ ಜಲಾನಯನ ಪ್ರದೇಶ ಇದಾಗಿದೆ.
ಇದು ಹುಲಿ, ಚಿರತೆ, ಕಾಡುನಾಯಿ, ಆನೆ, ಕಾಟಿ, ಇಂಡಿಯನ್ ಪ್ಯಾಂಗೋಲಿನ್ ಹಾಗೂ ಬೃಹತ್ ಹಾರ್ನ್ ಬಿಲ್ ಹಕ್ಕಿಗಳ ನೆಲೆವೀಡಾಗಿದೆ. ಅಲ್ಲದೆ,
ಕ್ಯಾಸಲ್ ರಾಕ್ ನೈಟ್ ಫ್ರಾಗ್ನಂತಹ ಅಪರೂಪದ ಕಪ್ಪೆ ಹಾಗೂ ಪಶ್ಚಿಮ ಘಟ್ಟದ ವಿಶಿಷ್ಟ ಸಸ್ಯಪ್ರಭೇದಗಳು ಇಲ್ಲಿವೆ.
ಈ ಹುಲಿ ಸಂರಕ್ಷಿತ ಪ್ರದೇಶವು ದಾಂಡೇಲಿ ವನ್ಯಜೀವಿ ಅಭಯಾರಣ್ಯ ಮತ್ತು ಅಣಶಿ ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿದ್ದು, ಜೈವಿಕವಾಗಿ ಸೂಕ್ಷ್ಮವಾಗಿರುವ ಪಶ್ಚಿಮ ಘಟ್ಟಗಳ ಪ್ರಮುಖ ಭಾಗವಾಗಿದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯ ಮತ್ತು ಅಣಶಿ ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿರುವ ಈ ಹುಲಿ ಸಂರಕ್ಷಿತ ಪ್ರದೇಶದ ಸುತ್ತ 0 ರಿಂದ 10 ಕಿಲೋಮೀಟರ್ಗಳವರೆಗೆ ಈ ಸೂಕ್ಷ್ಮ ವಲಯದ ವ್ಯಾಪ್ತಿ ಇರಲಿದೆ.
ಮೀಸಲು ಅರಣ್ಯದ ಉತ್ತರ, ಪಶ್ಚಿಮ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಈಗಾಗಲೇ ‘ಭೀಮಗಡ ವನ್ಯಜೀವಿ ಅಭಯಾರಣ್ಯ’ ಇರುವುದರಿಂದ, ಆ ಭಾಗಗಳಲ್ಲಿ ಯಾವುದೇ ಪ್ರತ್ಯೇಕ ಪರಿಸರ ಸೂಕ್ಷ್ಮವಲಯವನ್ನು ಗುರುತಿಸಿಲ್ಲ. ಅಂದರೆ, ಒಂದು ಅಭಯಾರಣ್ಯದ ಮತ್ತೊಂದಕ್ಕೆ ತಾಗಿಕೊಂಡಿರುವುದರಿಂದ ಅಲ್ಲಿ ನೈಸರ್ಗಿಕ ರಕ್ಷಣೆ ಈಗಾಗಲೇ ಇದೆ ಎಂದು ಪರಿಗಣಿಸಲಾಗಿದೆ.
ಒಟ್ಟು ವಿಸ್ತೀರ್ಣ: 663.32 ಚದರ ಕಿ.ಮೀ.ಜೈವಿಕವಾಗಿ ಸೂಕ್ಷ್ಮವಾಗಿರುವ
ಪಶ್ಚಿಮ ಘಟ್ಟಗಳ ರಕ್ಷಣೆ. ಈಶಾನ್ಯ ದಿಕ್ಕಿನಲ್ಲಿ, ಇಎಸ್ಝಡ್ ಗಡಿಯಿಂದ 5 ಕಿ.ಮೀ.ನಿಂದ 10 ಕಿ.ಮೀ. ವರೆಗೆ ವಿಸ್ತರಿಸಿದರೆ, ಪೂರ್ವದಲ್ಲಿ ಇದು 1 ಕಿ.ಮೀ.ನಿಂದ 7 ಕಿ.ಮೀ. ವರೆಗೆ ವಿಸ್ತರಿಸಿದೆ. ಪ್ರಸ್ತಾವಿತ ಪರಿಸರ ಸೂಕ್ಷ್ಮವಲಯವು 75 ಚದರ ಕಿ.ಮೀ. ಕಂದಾಯ ಭೂಮಿ, 84 ಚದರ ಕಿ.ಮೀ. ಕಂದಾಯ ಗ್ರಾಮಗಳನ್ನು ಒಳಗೊಂಡಿದ್ದು, 503 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಒಳಗೊಂಡಿದೆ. 60 ದಿನಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಅಂತಿಮ ಅಧಿಸೂಚನೆ ಹೊರಡಿಸಿದ ನಂತರ, ಸರ್ಕಾರವು ಸ್ಥಳೀಯ ಕರ್ನಾಟಕ ಸಮುದಾಯಗಳೊಂದಿಗೆ ಸಮಾಲೋಚಿಸಿ ಎರಡು ವರ್ಷಗಳ ಒಳಗೆ ಪರಿಸರ ಸೂಕ್ಷ್ಮ ಪ್ರದೇಶಕ್ಕಾಗಿ ವಲಯ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಈ ನಿರ್ಧಾರವು ಅರಣ್ಯದ ಅಂಚಿನಲ್ಲಿರುವ ಗ್ರಾಮಸ್ಥರ ಮೇಲೆ ಇದು ಬೀರುವ ಪ್ರಭಾವದ ಬಗ್ಗೆ ಈಗ ಚರ್ಚೆಗಳು ಆರಂಭವಾಗಿವೆ.
