ಸುದ್ದಿ ಕನ್ನಡ ವಾರ್ತೆ
​ಧಾರವಾಡ: ಕರ್ನಾಟಕದ ಖ್ಯಾತ, ಹಿರಿಯ ಮನೋವೈದ್ಯ, ಪ್ರೇರಣಾದಾಯಿ ವಾಗ್ಮಿ, ಅಂಕಣಕಾರ ಹಾಗೂ ಸಮಾಜಮುಖಿ ಚಿಂತಕ ಡಾ. ಆನಂದ ಪಾಂಡುರಂಗಿ ಅವರು ಗುರುವಾರ ಬೆಳಿಗ್ಗೆ ನಿಧನರಾದರು.

​ಅವರಿಗೆ 72 ವರ್ಷ ವಯಸ್ಸಾಗಿತ್ತು.
​ಹೃದಯಾಘಾತಕ್ಕೊಳಗಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

​ಪತ್ನಿ ಅನುಪಮಾ, ಪುತ್ರ ಡಾ. ಆದಿತ್ಯ ಪಾಂಡುರಂಗಿ, ಸೊಸೆ ಡಾ. ಸ್ವಪ್ನಾ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
​ಧಾರವಾಡವನ್ನು ಕರ್ಮಭೂಮಿಯನ್ನಾಗಿಸಿಕೊಂಡಿದ್ದ ಆನಂದ ಪಾಂಡುರಂಗಿ ಅವರು ತಮ್ಮ.
​ಮನೋವೈದ್ಯಕೀಯ ಕ್ಷೇತ್ರದಲ್ಲಿ ಹಲವು ದಶಕಗಳ ಕಾಲ ಸಲ್ಲಿಸಿದ ಸೇವೆಯ ಮೂಲಕ ಸಾವಿರಾರು ಜನರ ಬದುಕುಗೆ ನೆಮ್ಮದಿ ಹಾಗೂ ಹೊಸ ಭರವಸೆ ತುಂಬಿದ್ದರು.
​ರೋಗಿಯನ್ನು ಕೇವಲ ಚಿಕಿತ್ಸೆಗೆ ಒಳಪಡಿಸುವ ವ್ಯಕ್ತಿಯಾಗಿ ನೋಡದೆ, ಅವರ ಮಾನಸಿಕ ಸಂಕಷ್ಟವನ್ನು ಆಲಿಸಿ, ಆತ್ಮೀವಾಗಿ ಮಾತನಾಡಿ, ಬದುಕಿನ ಬಗ್ಗೆ ಧೈರ್ಯ ತುಂಬುವುದು ಅವರ ಚಿಕಿತ್ಸಾ ವಿಧಾನದ ವಿಶೇಷತೆಯಾಗಿತ್ತು.

​ಸರಳತೆ, ಸಜ್ಜನಿಕೆ, ಕಾಳಜಿ ಮತ್ತು ಮಾನವೀಯ ಸ್ಪಂದನೆ ಅವರ ವ್ಯಕ್ತಿತ್ವದ ಪ್ರಮುಖ ಗುಣಗಳಾಗಿದ್ದವು.ಡಾ. ಆನಂದ ಪಾಂಡುರಂಗಿ ಅವರ ಅಗಲಿಕೆಯಿಂದ ಧಾರವಾಡ ಮಾತ್ರವಲ್ಲದೆ ಇಡೀ ರಾಜ್ಯದ ವೈದ್ಯಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವೈದ್ಯನಾಗಿ ಕರ್ತವ್ಯನಿಷ್ಠೆ, ಸಮಾಜಸೇವಕರಾಗಿ ಕಾಳಜಿ ಮತ್ತು ಮಾನವೀಯ ವ್ಯಕ್ತಿಯಾಗಿ ತೋರಿದ ಅವರ ಬದುಕು, ಅವರು ಸೇವೆ ಸಲ್ಲಿಸಿದ ಅಸಂಖ್ಯಾತ ಜನರ ನೆನಪಿನಲ್ಲಿ ದೀರ್ಘಕಾಲ ಉಳಿಯಲಿದೆ. ಅವರ ನಿಧನಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ,ಧಾರವಾಡ,ಉತ್ತರಕನ್ನಡ ಜಿಲ್ಲೆಯ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.