ಸುದ್ದಿ ಕನ್ನಡ ವಾರ್ತೆ

​ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಜಿಲ್ಲೆಯ ಸಾಧಕರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.

​ಕೇಂದ್ರ ಸಾಂಸ್ಕೃತಿಕ ಇಲಾಖೆಯ ಅಡಿಯಲ್ಲಿನ ನವದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ದೇಶದ ಪ್ರತಿಷ್ಠಿತ ‘ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’ಗಳನ್ನು ಘೋಷಿಸಿದ್ದು, ನಮ್ಮ ಕ್ಷೇತ್ರದ ಇಬ್ಬರು ಪ್ರಸಿದ್ಧ ಕಲಾ ಸಾಧಕರು ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

​ಯಕ್ಷಗಾನ ರಂಗಭೂಮಿಯ ಖ್ಯಾತ ಕಲಾವಿದ, ಸಂಘಟಕ ಹಾಗೂ ನೃತ್ಯ ಸಂಯೋಜಕರಾದ ಹೊನ್ನಾವರ ತಾಲೂಕಿನ ಗುಣವಂತೆಯ ಶಿವಾನಂದ ಹೆಗಡೆ ಕೆರೆಮನೆ ಹಾಗೂ ತಮ್ಮ ವಿಶಿಷ್ಟ ಕಲಾ ನೈಪುಣ್ಯತೆಯಿಂದ ಸಂಗೀತ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಶಿರಸಿ ತಾಲೂಕಿನ ಬಿಸಿಲುಕೊಪ್ಪದ ಪ್ರಸಿದ್ಧ ರುದ್ರ ವೀಣಾ ವಾದಕಿ ವಿದುಷಿ ಜ್ಯೋತಿ ಹೆಗಡೆ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

​ರಾಷ್ಟ್ರಮಟ್ಟದಲ್ಲಿ ನಮ್ಮ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಇಬ್ಬರೂ ಮಹಾನ್ ಸಾಧಕರ ನಿರಂತರ ಕಲಾ ಸೇವೆಗೆ ಸಂದ ಅತ್ಯುತ್ತಮ ಪುರಸ್ಕಾರ ಇದಾಗಿದೆ. ಪ್ರಶಸ್ತಿ ವಿಜೇತ ಇಬ್ಬರಿಗೂ ನನ್ನ ಹಾಗೂ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಇವರ ಕಲಾ ಯಾನ ಹೀಗೆಯೇ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸುತ್ತೇನೆ. ಎಂದು ಹೇಳಿದ್ದಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು.