ಸುದ್ದಿ ಕನ್ನಡ ವಾರ್ತೆ
ಕಾರವಾರ: ಮಹಿಳಾ ಪ್ರಯಾಣಿಕರ ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕಾರವಾರ ರೈಲ್ವೆ ನಿಲ್ದಾಣದಲ್ಲಿ ರೋಟರಿ ಕ್ಲಬ್ ವತಿಯಿಂದ ಸುಮಾರು ₹1 ಲಕ್ಷ ವೆಚ್ಚದಲ್ಲಿ ‘ಪಿಂಕ್ ಬಬಲ್‌’ ವಿಶೇಷ ವಿಶ್ರಾಂತಿ ಆಸನ ವ್ಯವಸ್ಥೆ ನಿರ್ಮಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಈ ಸೌಲಭ್ಯವನ್ನು ಉದ್ಘಾಟಿಸಿದ ಅವರು, ಮಹಿಳೆಯರು ರೈಲು ಬರುವವರೆಗೆ ಸುರಕ್ಷಿತ ವಾತಾವರಣದಲ್ಲಿ ಕಾಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ ಎಂದರು. ಮಹಿಳೆಯರಿಗೆ ತೊಂದರೆ ನೀಡುವವರ ವಿರುದ್ಧ ರೈಲ್ವೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಡಗಾಂವ್-ಕಾರವಾರ ರೈಲು ಸೇವೆ ಖಾಯಂಗೊಂಡಿರುವುದು ಈ ಭಾಗದ ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಜೊತೆಗೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ಎಸಿ ನಿರೀಕ್ಷಣಾ ಕೊಠಡಿ, ಲಿಫ್ಟ್ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.