ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಮನೆಯ ಮುಂಭಾಗದಲ್ಲಿದ್ದ ಶಡ್ ನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಫರ್ಷಿಸಿ ವಿದ್ಯುತ್ ಆಘಾತಕ್ಕೊಳಗಾಗಿ ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಶುಕ್ರವಾರ ಗೋವಾದ ವಾಸ್ಕೊ ಮಂಗೋರ್ ಹಿಲ್ ನಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾದ ಮಾಹಿತಿಯ ಅನುಸಾರ- ತನ್ನ ಮನೆಯ ಮುಂಭಾಗದಲ್ಲಿದ್ದ ತಗಡಿನ ಶೆಡ್ ನಲ್ಲಿ ಆಟವಾಡುತ್ತಿದ್ದಾಗ ಅಲ್ಲಿಯೇ ಸಿಲುಕಿದ್ದ ವಿದ್ಯುತ್ ತಂತಿಯನ್ನು ಮಗು ಸ್ಪರ್ಷಿಸಿತು ಎನ್ನಲಾಗಿದೆ. ಈ ಮಗುವಿಗೆ ಭಾರಿ ವಿದ್ಯುತ್ ಶಾಕ್ ಹೊಡೆದಿದ್ದರಿಂದ ಆತ ಅಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ.
ಕುಟುಂಬ ಸದಸ್ಯರು ಈ ಮಗುವನ್ನು ಕೂಡಲೇ ಚಿಕಲಿಮ್ ನ ಉಪಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತಪಾಸಣೆ ನಡೆಸಿದಾಗ ಅಷ್ಟರಲ್ಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಶುಕ್ರವಾರ ಮಧ್ಯಾನ್ಹ ಈ ಘಟನೆಯ ಮಾಹಿತಿ ಬಂದ ಕೂಡಲೇ ಪೋಲಿಸರು ಆಸ್ಪತ್ರೆಗೆ ತೆರಳಿ ಮೃತಪಟ್ಟ ಮಗುವಿನ ತಂದೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಶವವನ್ನು ಮಡಗಾಂವ ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ವಾಸ್ಕೊ ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
