ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕುಳಿಮಾಗೋಡ ಜಲಪಾತದ ಆವರಣದಲ್ಲಿ ಸೆಪ್ಟೆಂಬರ್ 13ರಂದು ಜನೋನ್ನತಿ ಟ್ರಸ್ಟ್, ಯಲ್ಲಾಪುರ ಹಾಗೂ ಕಂಟೆಂಟ್ ಕ್ರಿಯೇಟರ್ ತನ್ಮಯ್ ಸಿದ್ದಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಂಗವಾಗಿ ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಖಾಲಿ ಬಾಟಲಿಗಳು ಹಾಗೂ ಇತರೆ ತ್ಯಾಜ್ಯವನ್ನು ಸಂಗ್ರಹಿಸಿ ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಪ್ರವಾಸಿ ತಾಣವನ್ನು ಸ್ವಚ್ಛವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಕಾಪಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ಜಲಪಾತಕ್ಕೆ ಆಗಮಿಸಿದ್ದ ಪ್ರವಾಸಿಗರು ಕೂಡ ಸ್ವಯಂಪ್ರೇರಿತರಾಗಿ ಕೈಜೋಡಿಸಿ, ಕಸ ಸಂಗ್ರಹಿಸುವ ಮೂಲಕ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದ ರೂವಾರಿಯಾದ ತನ್ಮಯ್ ಸಿದ್ದಿ ಅವರ ಪರಿಸರ ಕಾಳಜಿ ಹಾಗೂ ಸಾಮಾಜಿಕ ಸೇವೆಗೆ ಜನೋನ್ನತಿ ಟ್ರಸ್ಟ್ ವತಿಯಿಂದ ತುಂಬುಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು.