ಸುದ್ದಿ ಕನ್ನಡ ವಾರ್ತೆ
ಬೆಂಗಳೂರು- ಡಾ. ಬಿ. ಡಿ. ಜತ್ತಿಯವರ ಜೀವನವು ಸರಳತೆ, ಪ್ರಾಮಾಣಿಕತೆ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ನಾಯಕತ್ವದ ಅಪೂರ್ವ ಸಂಗಮವಾಗಿದೆ. 10 ಸೆಪ್ಟೆಂಬರ್ 1912ರಂದು ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಜನಿಸಿದ ಅವರು, ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದರೂ, ತಮ್ಮ ಪರಿಶ್ರಮ ಮತ್ತು ನೈತಿಕ ಮೌಲ್ಯಗಳ ಬಲದಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳವರೆಗೆ ಏರಿದರು ಎಂದು ಖ್ಯಾತ ಉದ್ದಿಮೆದಾರರಾದ ಮಿಥುನ ವಿಠ್ಠಲ ಹುಗ್ಗಿ ಅವರು ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಸಂಸ್ಥಾಪಕರು ಹಾಗೂ ಏಕೈಕ ಕನ್ನಡಿಗ ರಾಷ್ಟ್ರಪತಿಗಳಾದ ಸನ್ಮಾನ್ಯ ಡಾ.ಬಿ.ಡಿ.ಜತ್ತಿಯವರ 114ನೇ ಜಯಂತೋತ್ಸವ,ಬಸವ ಸಮಿತಿಯ 62ನೇ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಡಾ.ಬಿ.ಡಿ.ಜತ್ತಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ಸ್ವಾತಂತ್ರ್ಯ ಚಳವಳಿಯ ಪ್ರಭಾವಕ್ಕೊಳಗಾದ ಜತ್ತಿಯವರು ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸಮಾಜಸೇವೆಯ ಆದರ್ಶಗಳನ್ನು ತಮ್ಮ ಸಾರ್ವಜನಿಕ ಜೀವನದ ಮಾರ್ಗದರ್ಶಕ ತತ್ವಗಳನ್ನಾಗಿ ಮಾಡಿಕೊಂಡರು. ಜಮಖಂಡಿ ಸಂಸ್ಥಾನ ಭಾರತದ ಒಕ್ಕೂಟದೊಂದಿಗೆ ವಿಲೀನ ಪ್ರಕ್ರಿಯೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು. 1958ರಿಂದ 1962ರವರೆಗೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಜನಪರ ಆಡಳಿತಕ್ಕೆ ತಮ್ಮದೇ ಆದ ಛಾಪು ಮೂಡಿಸಿದರು. ಈ ಸಮಯದಲ್ಲಿ ಕರ್ನಾಟಕ ಭೂಸುಧಾರಣಾ ಕ್ರಾಂತಿಕಾರಿ ಕಾಯ್ದೆಯ ಅನುಷ್ಠಾನದ ರೂವಾರಿಯಾಗಿದ್ದರು.
ಅವರ ಸಾರ್ವಜನಿಕ ಬದುಕು ಮುಂದೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್, ಒಡಿಶಾದ ರಾಜ್ಯಪಾಲ ಮತ್ತು ಭಾರತದ ಐದನೇ ಉಪರಾಷ್ಟ್ರಪತಿ ಎಂಬ ಉನ್ನತ ಜವಾಬ್ದಾರಿಗಳಿಗೆ ವಿಸ್ತರಿಸಿತು. ರಾಷ್ಟ್ರಪತಿ ಫಬ್ರುದ್ದೀನ್ ಅಲಿ ಅಹಮದ್ ಅವರ ನಿಧನದ ನಂತರ, 12 ಫೆಬ್ರವರಿ 1977ರಿಂದ 24 ಜುಲೈ 1977ರವರೆಗೆ ಭಾರತದ ಕಾರ್ಯನಿರ್ವಹಣಾ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಅವರು, ದೇಶದ ಅತ್ಯುನ್ನತ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಿದರು.
ಡಾ. ಜತ್ತಿಯವರ ಮತ್ತೊಂದು ಅಮೂಲ್ಯ ಕೊಡುಗೆ 1964ರಲ್ಲಿ ಸ್ಥಾಪಿತವಾದ ಬಸವ ಸಮಿತಿಯ ಸಂಸ್ಥಾಪಕ-ಅಧ್ಯಕ್ಷರಾಗಿ ಅವರ ಸೇವೆ. ಬಸವಣ್ಣನವರ ವಚನಗಳು, ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ದೇಶ-ವಿದೇಶಗಳಿಗೆ ತಲುಪಿಸಲು ಅವರು ಸಂಘಟಿತ ಚಳವಳಿಗೆ ಭದ್ರ ಬುನಾದಿ ಹಾಕಿದರು. ಜಮಖಂಡಿಯ ಸಾವಳಗಿಯಿಂದ ರಾಷ್ಟ್ರಪತಿ ಭವನದವರೆಗೆ ಸಾಗಿದ ಡಾ. ಬಿ. ಡಿ. ಜತ್ತಿಯವರ ಪಯಣವು “ಹಳ್ಳಿಯಿಂದ ದಿಲ್ಲಿಗೆ” ಎಂಬ ಗಾಂಧಿಯವರ ನಾಣ್ಣುಡಿಯಂತೆ, ಭಾರತದ ಪ್ರಜಾಪ್ರಭುತ್ವದಲ್ಲಿ ಮೌಲ್ಯಾಧಾರಿತ ನಾಯಕತ್ವದ ಶಾಶ್ವತ ಪ್ರೇರಣೆಯಾಗಿದೆ ಎಂದು ಹೇಳಿದರು.
ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರು,ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಉಪಸ್ಥಿತರಿದ್ದರು.
