ಸುದ್ದಿ ಕನ್ನಡ

ಹೊನ್ನಾವರ: ಸ್ವಾತಂತ್ರ್ಯ ಬಂದು ಏಳು ದಶಕಗಳಿಗಿಂತ ಹೆಚ್ಚು ಕಾಲ ಕಳೆದರೂ, ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಿತ್ತಲಕೇರಿ ಮಜರೆಯ ಜನರಿಗೆ ಇಂದಿಗೂ ಸಾರ್ವಜನಿಕ ರಸ್ತೆ ಸೌಲಭ್ಯ ದೊರೆತಿಲ್ಲ. ಸುಮಾರು 50ಕ್ಕೂ ಹೆಚ್ಚು ಮನೆಗಳು ಇರುವ ಈ ಪ್ರದೇಶದ ನಿವಾಸಿಗಳು ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿಯಲ್ಲಿದ್ದು, ಶಾಶ್ವತ ರಸ್ತೆ ಹಾಗೂ ಕಾಲುಸಂಕ ನಿರ್ಮಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 

ದೊಡ್ಡಹಿತ್ತಲಕೇರಿಗೆ ತೆರಳಲು ಇಂದಿಗೂ ಸಮರ್ಪಕ ಸಾರ್ವಜನಿಕ ರಸ್ತೆ ಇಲ್ಲ. ಪರಿಣಾಮವಾಗಿ ಗ್ರಾಮಸ್ಥರು ಖಾಸಗಿ ಜಮೀನು ಹಾಗೂ ತೋಟಗಳ ಮೂಲಕವೇ ಮನೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಭಾಗದಲ್ಲಿ ಮಳೆಯಾದಾಗ ಗ್ರಾಮದ ಮಧ್ಯೆ ಹರಿಯುವ ಭಾಸ್ಕೇರಿ ಹೊಳೆ ಉಕ್ಕಿ ಹರಿದು, ಸುತ್ತಮುತ್ತಲಿನ ತೋಟಗಳು ಮತ್ತು ದಾರಿಗಳು ಸಂಪೂರ್ಣ ಜಲಾವೃತವಾಗುತ್ತವೆ. ಈ ವೇಳೆ ಗ್ರಾಮಸ್ಥರು ಸೊಂಟದವರೆಗೆ, ಕೆಲವೊಮ್ಮೆ ಕುತ್ತಿಗೆ ಮಟ್ಟದ ನೀರಿನಲ್ಲಿ ನಡೆದು ಸಂಚರಿಸಬೇಕಾಗುತ್ತದೆ. ಮನೆಗಳ ಜಗುಲಿಯವರೆಗೂ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಹಲವಾರು ಕುಟುಂಬಗಳು ಕಾಳಜಿ ಕೇಂದ್ರಗಳಿಗೆ ಆಶ್ರಯ ಪಡೆಯಬೇಕಾಗುತ್ತದೆ.

ಗ್ರಾಮದ ಮಹಿಳೆಯರು, ಪುರುಷರು ಹಾಗೂ ಶಾಲಾ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಪ್ರತಿನಿತ್ಯ ಉದ್ಯೋಗ, ಶಿಕ್ಷಣ ಹಾಗೂ ಇತರ ಅಗತ್ಯ ಕಾರ್ಯಗಳಿಗಾಗಿ ಹೊರ ಸಂಚಾರ ನಡೆಸುತ್ತಾರೆ. ಆದರೆ ಮಳೆಗಾಲದಲ್ಲಿ ಹೊಳೆ ತುಂಬಿದರೆ ಗ್ರಾಮ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುತ್ತದೆ. ಉದ್ಯೋಗ, ಶಾಲೆ, ಆಸ್ಪತ್ರೆ ಸೇರಿದಂತೆ ಯಾವುದೇ ಅಗತ್ಯ ಸೇವೆಗಳಿಗೆ ತೆರಳುವುದು ಅಸಾಧ್ಯವಾಗುತ್ತದೆ.

ಇತ್ತೀಚೆಗೆ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟ ಸಂದರ್ಭದಲ್ಲಿ, ಕುತ್ತಿಗೆ ಮಟ್ಟದ ನೀರಿನಲ್ಲಿ ಶವಪೆಟ್ಟಿಗೆಯನ್ನು ಹೊತ್ತು ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಬೇಕಾದ ಘಟನೆ ನಡೆದಿದ್ದು, ಈ ದೃಶ್ಯ ಸ್ಥಳೀಯರ ಸಂಕಷ್ಟದ ಬದುಕನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಮೃತದೇಹವನ್ನೂ ಸುರಕ್ಷಿತವಾಗಿ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ದಶಕಗಳಿಂದ ರಸ್ತೆ, ಕಾಲುದಾರಿ ಹಾಗೂ ಭಾಸ್ಕೇರಿ ಹೊಳೆಗೆ ಶಾಶ್ವತ ಕಾಲುಸಂಕ ನಿರ್ಮಿಸುವಂತೆ ಗ್ರಾಮಸ್ಥರು ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ವಿವಿಧ ಕಾರಣಗಳು ಮತ್ತು ತಕರಾರುಗಳ ನೆಪದಲ್ಲಿ ಕಾಮಗಾರಿ ಆರಂಭವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

“ನಾವು ನೂರಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಮಳೆಗಾಲ ಬಂದಾಗಲೆಲ್ಲ ಜೀವಭಯದಲ್ಲಿ ಬದುಕುವಂತಾಗಿದೆ. ಮಕ್ಕಳ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆ ಸೇರಿದಂತೆ ಪ್ರತಿಯೊಂದು ಅಗತ್ಯಕ್ಕೂ ಸಂಕಷ್ಟ ಎದುರಾಗುತ್ತಿದೆ. ಕೂಡಲೇ ಸಾರ್ವಜನಿಕ ಕಾಲುದಾರಿ ಹಾಗೂ ಶಾಶ್ವತ ಕಾಲುಸಂಕ ನಿರ್ಮಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೂಲಭೂತ ಹಕ್ಕಾಗಿರುವ ಸುರಕ್ಷಿತ ಸಂಚಾರ ವ್ಯವಸ್ಥೆಗಾಗಿ ದೊಡ್ಡಹಿತ್ತಲಕೇರಿ ಜನರು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸಿ ಶೀಘ್ರ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.