ಸುದ್ದಿ ಕನ್ನಡ ವಾರ್ತೆ
ಶಿರಸಿ: ಪ್ರತಿಯೊಬ್ಬ ಮನುಷ್ಯನು ಜನ್ಮತಃ ದೇವ, ಋಷಿ ಹಾಗೂ ಪಿತೃ ಎಂಬ ಮೂರು ಮೂಲಭೂತ ಋಣಗಳನ್ನು ಹೊತ್ತು ಬರುತ್ತಾನೆ. ದೇವತೆಗಳು, ಋಷಿಗಳು ಹಾಗೂ ಪಿತೃಗಳಿಂದ ಪಡೆದ ಅನುಗ್ರಹ ಮತ್ತು ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಈ ಋಣಗಳನ್ನು ತೀರಿಸಲು ಪ್ರಯತ್ನಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಶಿಷ್ಯ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ದೇವ ಋಣವನ್ನು ಯಜ್ಞ, ದೇವತಾ ಪೂಜೆ, ಜಪ ಹಾಗೂ ಪ್ರಾರ್ಥನೆಗಳ ಮೂಲಕ, ಋಷಿ ಋಣವನ್ನು ವೇದ-ಶಾಸ್ತ್ರಗಳ ಅಧ್ಯಯನ, ಜ್ಞಾನ ಹಂಚಿಕೆ ಹಾಗೂ ಪರಂಪರೆಯ ಸಂರಕ್ಷಣೆಯ ಮೂಲಕ ತೀರಿಸಬೇಕು. ತಂದೆ-ತಾಯಿ ಹಾಗೂ ಪೂರ್ವಜರಿಂದ ಜೀವನ ದೊರೆತಿರುವುದರಿಂದ ಪಿತೃ ಋಣವೂ ಪ್ರತಿಯೊಬ್ಬರ ಮೇಲಿದೆ. ಸತ್ಸಂತತಿ ಬೆಳೆಸುವುದು, ಶ್ರಾದ್ಧ, ತರ್ಪಣ ಮುಂತಾದ ಕರ್ತವ್ಯಗಳನ್ನು ನೆರವೇರಿಸುವ ಮೂಲಕ ಪಿತೃ ಋಣ ತೀರಿಸಬೇಕು ಎಂದು ತಿಳಿಸಿದರು.
ಎಲ್ಲರಿಗೂ ವಿಸ್ತೃತ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗದಿದ್ದರೂ ಪ್ರತಿದಿನ ಸಂಕ್ಷಿಪ್ತವಾಗಿ ದೇವತಾ ಪ್ರಾರ್ಥನೆ, ಜಪ, ಬ್ರಹ್ಮಯಜ್ಞ ಹಾಗೂ ಸ್ಮರಣೆಗಳನ್ನು ಶ್ರದ್ಧೆಯಿಂದ ಮಾಡಬೇಕು. ತ್ರಿಋಣಗಳ ಅರಿವಿನಿಂದ ಧರ್ಮಾಚರಣೆ ನಡೆಸಿದಾಗ ಜೀವನ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು.
ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಉಪಸ್ಥಿತರಿದ್ದರು. ಈಶ್ವರ ಭಟ್, ಶಾಂತರಾಮ ಹೆಗಡೆ ಮತ್ತಿತರರು ಭಾಗವಹಿಸಿದ್ದರು. ಬೆಳಿಗ್ಗೆ ಗಾಯತ್ರೀ ಅನುಷ್ಠಾನ, ಕುಂಕುಮಾರ್ಚನೆ, ಸ್ತೋತ್ರ, ಭಗವದ್ಗೀತಾ ಪಠಣ ನಡೆಯಿತು.
