ಸುದ್ದಿ ಕನ್ನಡ ವಾರ್ತೆ
ಶಿರಸಿ: ಪ್ರತಿಯೊಬ್ಬ ಮನುಷ್ಯನು ಜನ್ಮತಃ ದೇವ, ಋಷಿ ಹಾಗೂ ಪಿತೃ ಎಂಬ ಮೂರು ಮೂಲಭೂತ ಋಣಗಳನ್ನು ಹೊತ್ತು ಬರುತ್ತಾನೆ. ದೇವತೆಗಳು, ಋಷಿಗಳು ಹಾಗೂ ಪಿತೃಗಳಿಂದ ಪಡೆದ ಅನುಗ್ರಹ ಮತ್ತು ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಈ ಋಣಗಳನ್ನು ತೀರಿಸಲು ಪ್ರಯತ್ನಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

​ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಶಿಷ್ಯ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ದೇವ ಋಣವನ್ನು ಯಜ್ಞ, ದೇವತಾ ಪೂಜೆ, ಜಪ ಹಾಗೂ ಪ್ರಾರ್ಥನೆಗಳ ಮೂಲಕ, ಋಷಿ ಋಣವನ್ನು ವೇದ-ಶಾಸ್ತ್ರಗಳ ಅಧ್ಯಯನ, ಜ್ಞಾನ ಹಂಚಿಕೆ ಹಾಗೂ ಪರಂಪರೆಯ ಸಂರಕ್ಷಣೆಯ ಮೂಲಕ ತೀರಿಸಬೇಕು. ತಂದೆ-ತಾಯಿ ಹಾಗೂ ಪೂರ್ವಜರಿಂದ ಜೀವನ ದೊರೆತಿರುವುದರಿಂದ ಪಿತೃ ಋಣವೂ ಪ್ರತಿಯೊಬ್ಬರ ಮೇಲಿದೆ. ಸತ್ಸಂತತಿ ಬೆಳೆಸುವುದು, ಶ್ರಾದ್ಧ, ತರ್ಪಣ ಮುಂತಾದ ಕರ್ತವ್ಯಗಳನ್ನು ನೆರವೇರಿಸುವ ಮೂಲಕ ಪಿತೃ ಋಣ ತೀರಿಸಬೇಕು ಎಂದು ತಿಳಿಸಿದರು.
​ಎಲ್ಲರಿಗೂ ವಿಸ್ತೃತ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗದಿದ್ದರೂ ಪ್ರತಿದಿನ ಸಂಕ್ಷಿಪ್ತವಾಗಿ ದೇವತಾ ಪ್ರಾರ್ಥನೆ, ಜಪ, ಬ್ರಹ್ಮಯಜ್ಞ ಹಾಗೂ ಸ್ಮರಣೆಗಳನ್ನು ಶ್ರದ್ಧೆಯಿಂದ ಮಾಡಬೇಕು. ತ್ರಿಋಣಗಳ ಅರಿವಿನಿಂದ ಧರ್ಮಾಚರಣೆ ನಡೆಸಿದಾಗ ಜೀವನ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು.

​ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಉಪಸ್ಥಿತರಿದ್ದರು. ಈಶ್ವರ ಭಟ್, ಶಾಂತರಾಮ ಹೆಗಡೆ ಮತ್ತಿತರರು ಭಾಗವಹಿಸಿದ್ದರು. ಬೆಳಿಗ್ಗೆ ಗಾಯತ್ರೀ ಅನುಷ್ಠಾನ, ಕುಂಕುಮಾರ್ಚನೆ, ಸ್ತೋತ್ರ, ಭಗವದ್ಗೀತಾ ಪಠಣ ನಡೆಯಿತು.