Banner Ad

ಸುದ್ದಿ ಕನ್ನಡ ವಾರ್ತೆ
ಕುಮಟಾ: ತಾಲೂಕಿನ ಬರ್ಗಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಮತ್ತು ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಸಹೋದರರಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೆಟ್ಕುಳಿ ಗ್ರಾಮದ ನಿವಾಸಿಗಳಾದ ಗುರು ಹರಿಕಾಂತ ಹಾಗೂ ವಿಠಲ ಹರಿಕಾಂತ ಎಂಬ ಸಹೋದರರು ಕಿಮಾನಿ ಕಡೆಯಿಂದ ಬೈಕ್‌ನಲ್ಲಿ ಬಂದು ಕುಮಟಾ ಕಡೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಕುಮಟಾದಿಂದ ಅಂಕೋಲಾ ಕಡೆಗೆ ಅತೀ ವೇಗವಾಗಿ ಚಲಿಸುತ್ತಿದ್ದ ತೆಲಂಗಾಣ ನೋಂದಣಿಯ ಕಾರು ಬೈಕ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ ಮತ್ತು ಕಾರು ಎರಡೂ ಸಂಪೂರ್ಣ ಜಖಂಗೊಂಡಿದ್ದು, ಬೈಕ್ ಸವಾರರಿಬ್ಬರು ರಸ್ತೆಯ ಮೇಲೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುವಂತಾಗಿತ್ತು.

Banner Ad

ಅಪಘಾತ ನಡೆದ ನಂತರ ಗಾಯಾಳುಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲೇ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಆದರೆ ತುರ್ತು ಸೇವೆಗೆ ಬರಬೇಕಾದ ಹೈವೇ ಅಂಬುಲೆನ್ಸ್‌ ಆಗಲಿ ಅಥವಾ ಸರ್ಕಾರಿ ಅಂಬುಲೆನ್ಸ್ ಆಗಲಿ ಸಕಾಲಕ್ಕೆ ಸ್ಥಳಕ್ಕೆ ತಲುಪಲಿಲ್ಲ. ಈ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಅಂಬುಲೆನ್ಸ್‌ ಲಭ್ಯವಿಲ್ಲದ ಕಾರಣ ಕೊನೆಗೆ ಖಾಸಗಿ ಅಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕಾಯಿತು.

ಅಂಬುಲೆನ್ಸ್‌ ಸೇವೆಯ ಇಂತಹ ಬೇಜವಾಬ್ದಾರಿತನದಿಂದಾಗಿ ಅಮಾಯಕ ಜೀವಗಳು ಅಪಾಯಕ್ಕೆ ಸಿಲುಕುತ್ತಿವೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಗೋಕರ್ಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Banner Ad