ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ಇಲ್ಲಿನ ಹೊಸೂರು ಶಂಕರಮಠದ ಎದುರು ಸುಮಾರು 10 ಅಡಿ ಆಳದ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ಯಶಸ್ವಿಯಾಗಿ ರಕ್ಷಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಎ.ಎಫ್‌.ಎಸ್‌.ಒ ಸುಬ್ರಮಣ್ಯ ಅವರ ನೇತೃತ್ವದ ತಂಡ ರಕ್ಷಣಾ ಕಾರ್ಯ ಕೈಗೊಂಡಿತು. ಲೀಡಿಂಗ್ ಫೈರ್ ಫೈಟರ್ ಕಾಂತರಾಜ್, ಫೈರ್ ಡ್ರೈವರ್ ವಿನಯ ಕುಮಾರ, ಫೈರ್ ಫೈಟರ್ ಸುನೀಲಕುಮಾರ ಡಿ, ಮತ್ತು ಪ್ರಸಾದ ನಾಯ್ಕ ಅವರು ಸಾರ್ವಜನಿಕರ ಸಹಕಾರದೊಂದಿಗೆ ಹರಸಾಹಸ ಪಟ್ಟರು.
ಅಗ್ನಿಶಾಮಕ ದಳದ ಸಿಬ್ಬಂದಿ ‘ಹೋಸ್’ ಸಹಾಯದಿಂದ ಗುಂಡಿಯಲ್ಲಿದ್ದ ಎಮ್ಮೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ರಕ್ಷಿಸುವಲ್ಲಿ ಯಶಸ್ವಿಯಾದರು. ಸಕಾಲದಲ್ಲಿ ಸ್ಪಂದಿಸಿ ಮೂಕ ಪ್ರಾಣಿಯ ಜೀವ ಉಳಿಸಿದ ಅಗ್ನಿಶಾಮಕ ದಳದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.