ಸುದ್ದಿ ಕನ್ನಡ ವಾರ್ತೆ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಸತತ ಭಾರಿ ಮಳೆಯಿಂದಾಗಿ ಕಾಳಿ ನದಿ ಮೈದುಂಬಿ ಹರಿಯುತ್ತಿದ್ದು, ಜಲಚರಗಳು ಹಾಗೂ ವನ್ಯಜೀವಿಗಳು ವಸತಿ ಪ್ರದೇಶಗಳತ್ತ ಮುಖ ಮಾಡುತ್ತಿವೆ. ಇಲ್ಲಿನ ಪಟೇಲ್ ನಗರದ ರಸ್ತೆಯಲ್ಲಿ ಗುರುವಾರ ರಾತ್ರಿ ಸುಮಾರು ನಾಲ್ಕು ಅಡಿ ಉದ್ದದ ಮೊಸಳೆ ಮರಿಯೊಂದು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.ಮೊಸಳೆ ಇರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ಅರಣ್ಯ ಇಲಾಖೆಗೆ ಹಾಗೂ ಉರಗ ರಕ್ಷಕ ರಜಾಕ್ ಶಾ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರಜಾಕ್ ಶಾ, ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಮೊಸಳೆ ಮರಿಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಬಳಿಕ ಅದನ್ನು ಸೂಕ್ತವಾದ ನೈಸರ್ಗಿಕ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡಲಾಗಿದ್ದು, ಸಂಭಾವ್ಯ ಅನಾಹುತ ತಪ್ಪಿದೆ.
ಭಾರಿ ಮಳೆಯಿಂದ ಕಾಳಿ ನದಿ ಉಕ್ಕಿ ಹರಿಯುತ್ತಿರುವುದರಿಂದ ರಸ್ತೆಬದಿಯ ಚರಂಡಿ ಅಥವಾ ನೀರಿನ ಕಾಲುವೆಗಳ ಮೂಲಕ ಈ ಮೊಸಳೆ ಮರಿ ವಸತಿ ಪ್ರದೇಶಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಮಾನ್ಸೂನ್ ಮುಂದುವರಿದಿರುವುದರಿಂದ ನದಿ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ವನ್ಯಜೀವಿಗಳು ಅಥವಾ ಸರೀಸೃಪಗಳು ಕಂಡುಬಂದರೆ ಸಾರ್ವಜನಿಕರು ಸ್ವತಃ ಹಿಡಿಯಲು ಯತ್ನಿಸದೇ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
