ಸುದ್ದಿ ಕನ್ನಡ ವಾರ್ತೆ
​ಶಿರಸಿ: ಇಂದು ಬೆಳಿಗ್ಗೆ ಶಿರಸಿ–ಕಿರವತ್ತಿ ರಸ್ತೆಯ ಅಚನಳ್ಳಿ ಸಮೀಪದ ಭೂತಪ್ಪ ದೇವಸ್ಥಾನದ ಬಳಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯ ಗಟಾರಕ್ಕಿಳಿದು ಒಂದು ಬದಿಗೆ ವಾಲಿದ ಘಟನೆ ನಡೆದಿದೆ.

​ಕಿರವತ್ತಿಯಿಂದ ಶಿರಸಿಗೆ ಬರುತ್ತಿದ್ದ ಈ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಇದ್ದರು. ಎದುರಿನಿಂದ ಅತಿವೇಗವಾಗಿ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿದ್ದ ವೇಳೆ ಚಾಲಕ ಬಸ್ ಅನ್ನು ರಸ್ತೆ ಬದಿಗೆ ತಿರುಗಿಸಿದ್ದು, ನಿಯಂತ್ರಣ ತಪ್ಪಿ ಗಟಾರಕ್ಕಿಳಿದು ಧರೆಗೆ ವಾಲಿದೆ ಎಂದು ತಿಳಿದುಬಂದಿದೆ.
​ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಬಸ್‌ನಿಂದ ಹೊರಬಂದರು. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ. ಬಳಿಕ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಪರ್ಯಾಯ ವಾಹನಗಳ ಮೂಲಕ ಶಿರಸಿಗೆ ತೆರಳಿದರು.

​ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.