ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ:ತಾಲೂಕಿನ ಕಳಚೆ ಸಮೀಪದ ಹೆಬ್ಬಾರಕುಂಬ್ರಿ ತಿರುವಿನ ರಸ್ತೆಯಲ್ಲಿ ನಿರಂತರ ಮಳೆಯ ಪರಿಣಾಮ ಗುರುವಾರ ಬೆಳಗಿನ ಜಾವ ಮತ್ತೆ ಭೂಕುಸಿತ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

​ಗುಡ್ಡದ ಅಂಚಿನ ಮಣ್ಣು ಕುಸಿದು ರಸ್ತೆಯ ಮೇಲೆ ಬೃಹತ್ ಬಂಡೆಕಲ್ಲುಗಳು ಹಾಗೂ ಮಣ್ಣು ಉರುಳಿ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕಳಚೆ-ಯಲ್ಲಾಪುರ ಸಂಪರ್ಕ ರಸ್ತೆಯಲ್ಲಿ ಉಂಟಾದ ಈ ಅಡಚಣೆಯಿಂದ ಗ್ರಾಮಸ್ಥರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸಿದರು.

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮಳೆಯ ನಡುವೆಯೇ ಶ್ರಮದಾನ ಮಾಡಿ, ರಸ್ತೆಗೆ ಬಿದ್ದಿದ್ದ ಬಂಡೆಕಲ್ಲುಗಳು ಮತ್ತು ಮಣ್ಣನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ಕೆಲವೇ ಸಮಯದಲ್ಲಿ ರಸ್ತೆ ಸಂಚಾರ ಪುನಃ ಆರಂಭವಾಯಿತು.

​ಸುಮಾರು ಐದು ವರ್ಷಗಳ ಹಿಂದೆ ಇದೇ ಕಳಚೆ ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಅಪಾರ ಪ್ರಮಾಣದ ಹಾನಿ ಉಂಟುಮಾಡಿತ್ತು. ಆ ದುರ್ಘಟನೆಯ ಕಹಿ ನೆನಪು ಇನ್ನೂ ಮಾಸುವ ಮುನ್ನವೇ ಇದೀಗ ಮತ್ತೆ ಭೂಕುಸಿತ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.