ಸುದ್ದಿ ಕನ್ನಡ ವಾರ್ತೆ
​ಜೋಯಿಡಾ:ತಾಲೂಕಿನ ಹನೋಲಿ ಕ್ರಾಸ್ – ಚಾಪೇರ ಕ್ರಾಸ್ ಮಧ್ಯೆ, ರಸ್ತೆಯ ಪಕ್ಕದಲ್ಲಿ ಕಾಡುಕೋಣಗಳ ಹಿಂಡು,ದನಗಳಂತೆ ಸಾಲಾಗಿ ಮೇಯುತ್ತಿರುವ ಅಪರೂಪದ ದೃಶ್ಯ ಸ್ಥಳೀಯರ ಮತ್ತು ಪ್ರವಾಸಿಗರ ಗಮನ ಸೆಳೆದಿದೆ.

​ಕಾಡಿನಿಂದ ನಾಡಿನತ್ತ ಮುಖ ಮಾಡಿರುವ ಕಾಡುಕೋಣಗಳು, ಯಾವುದೇ ಭಯವಿಲ್ಲದೇ ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ಮೇಯಲು ಬೀಡು ಬಿಟ್ಟಿದ್ದವು. ಸಾಮಾನ್ಯವಾಗಿ ಜನರನ್ನು ಕಂಡರೆ ಓಡಿಹೋಗುವ ಈ ವನ್ಯಜೀವಿಗಳು, ಇಲ್ಲಿ ಮಾತ್ರ ಸಾಕು ಪ್ರಾಣಿಗಳಂತೆ ಶಾಂತವಾಗಿ ನಿಂತಿದ್ದನ್ನು ಕಂಡು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

​ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ತಮ್ಮ ಮೊಬೈಲ್‌ಗಳಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಆದರೆ, ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲೇ ವನ್ಯಜೀವಿಗಳು ಹೀಗೆ ಬೀಡು ಬಿಡುತ್ತಿರುವುದರಿಂದ ರಾತ್ರಿ ವೇಳೆಯ ಸಂಚಾರಕ್ಕೆ ಸವಾರರು ಕೊಂಚ ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಸೂಕ್ತ ನಿಗಾ ವಹಿಸಬೇಕಾಗಿ ವಿನಂತಿಸಿದ್ದಾರೆ.