ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನಲ್ಲಿ
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ನುಜ್ಜಿ- ಅಣಶಿ-ಕಾರವಾರ ರಾಜ್ಯ ಹೆದ್ದಾರಿಯ ರಸ್ತೆಯ ದುಸ್ಥಿತಿ ಮತ್ತಷ್ಟು ಬಯಲಾಗಿದ್ದು, ಸ್ವಲ್ಪ ಮಳೆಯಾದರೂ ರಸ್ತೆಯ ಮೇಲೆಯೇ ನೀರು ನಿಂತು ಕೆರೆಯಂತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು ಜೀವದ ಹಂಗು ತೊರೆದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕುಂಬಾರವಾಡಾದಿಂದ ಅಣಶಿ ಮಾರ್ಗವಾಗಿ ನುಜ್ಜಿ-ನಿಗುಂಡಿವರೆಗೆ ರಸ್ತೆಯ ಹಲವೆಡೆ ದೊಡ್ಡ ಗುಂಡಿಗಳು ಉಂಟಾಗಿವೆ. ಮಳೆನೀರು ಗುಂಡಿಗಳಲ್ಲಿ ತುಂಬಿಕೊಳ್ಳುವುದರಿಂದ ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎಂಬುದೇ ವಾಹನ ಸವಾರರಿಗೆ ತಿಳಿಯದಂತಾಗಿದೆ. ಪರಿಣಾಮ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಅಪಘಾತಕ್ಕೀಡಾಗುವ ಅಪಾಯ ಹೆಚ್ಚಾಗಿದೆ.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ಬಾರಿ ಸಾರ್ವಜನಿಕರು ರಸ್ತೆ ದುರಸ್ತಿ ಮಾಡುವಂತೆ ಮನವಿ ಮಾಡಿದರೂ, ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇನ್ನೂ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮಳೆಗಾಲ ಆರಂಭವಾಗಿರುವುದರಿಂದ ರಸ್ತೆ ಇನ್ನಷ್ಟು ಹದಗೆಡುವ ಸಾಧ್ಯತೆ ಇದ್ದು, ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ,ಮಳೆಗಾಲ ಮುಗಿಯುವವರಗೆ ತಾತ್ಕಾಲಿಕ ರಸ್ತೆಯ ಗುಂಡಿಗಳನ್ನು ಮುಚ್ಚಿ, ಮಳೆನೀರು ನಿಲ್ಲದಂತೆ ಅಗತ್ಯ ಕಾಮಗಾರಿಕೈಗೊಂಡು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
