ಸುದ್ದಿ ಕನ್ನಡ ವಾರ್ತೆ
​ಜೋಯಿಡಾ: ಪದ್ಮಶ್ರೀ ಪುರಸ್ಕೃತ, ತೂಗುಸೇತುಗಳ ನಿರ್ಮಾಣದ ಮೂಲಕ ಗ್ರಾಮೀಣ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಹಿರಿಯ ಇಂಜಿನಿಯರ್ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಶಾಸಕರಾದ ಆರ್.ವಿ. ದೇಶಪಾಂಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

​ಈ ಕುರಿತು ಸಂತಾಪ ಸಂದೇಶ ಬಿಡುಗಡೆ ಮಾಡಿರುವ ಅವರು, “ಡಾ. ಗಿರೀಶ್ ಭಾರದ್ವಾಜ್ ಅವರು ಕೇವಲ ತಂತ್ರಜ್ಞಾನದ ಸಾಧಕರಲ್ಲ, ತಮ್ಮ ಜ್ಞಾನವನ್ನು ಗ್ರಾಮೀಣ ಜನರ ಬದುಕಿನ ಉನ್ನತಿಗಾಗಿ ಸಮರ್ಪಿಸಿಕೊಂಡ ಅಪರೂಪದ ತಾಂತ್ರಿಕ ಯೋಗಿ. ನದಿ, ಹಳ್ಳ-ಕೊಳ್ಳಗಳಿಂದ ಸಂಪರ್ಕದಿಂದ ವಂಚಿತವಾಗಿದ್ದ ನೂರಾರು ಹಳ್ಳಿಗಳಿಗೆ ತೂಗುಸೇತುಗಳ ಮೂಲಕ ಜೀವನಾಡಿ ನಿರ್ಮಿಸಿದ ಅವರ ಸೇವೆ ಅನನ್ಯ. ಅವರು ಕಟ್ಟಿದ್ದು ಕೇವಲ ಸೇತುಗಳನ್ನಲ್ಲ, ಗ್ರಾಮಗಳನ್ನು, ಬದುಕುಗಳನ್ನು ಹಾಗೂ ಮಾನವೀಯ ಹೃದಯಗಳನ್ನು ಪರಸ್ಪರ ಬೆಸೆಯುವ ಬಾಂಧವ್ಯದ ಸಂಕೇತಗಳನ್ನು” ಎಂದು ಹೇಳಿದ್ದಾರೆ.

​”ಗ್ರಾಮೀಣ ಭಾರತದ ಅಭಿವೃದ್ಧಿಗೆ ತಮ್ಮ ಇಂಜಿನಿಯರಿಂಗ್ ಪರಿಣತಿಯನ್ನು ಸಮಾಜಮುಖಿ ಕಾರ್ಯಕ್ಕೆ ಸಮರ್ಪಿಸಿದ ಅವರ ದೂರದೃಷ್ಟಿ ಮತ್ತು ಸೇವಾಭಾವ ಸದಾ ಸ್ಮರಣೀಯ. ನನ್ನ ಕ್ಷೇತ್ರದ ಜೋಯಿಡಾ ತಾಲೂಕಿನ ಶಿವಪುರದಲ್ಲಿ ಅವರು ನಿರ್ಮಿಸಿದ ತೂಗುಸೇತುವೆ ಅವರ ಅಸಾಧಾರಣ ಕೊಡುಗೆಯ ಜೀವಂತ ಸಾಕ್ಷಿಯಾಗಿದೆ” ಎಂದು ದೇಶಪಾಂಡೆ ಸ್ಮರಿಸಿದ್ದಾರೆ.

​ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಆರ್.ವಿ. ದೇಶಪಾಂಡೆ ಪ್ರಾರ್ಥಿಸಿದ್ದಾರೆ.