ಸುದ್ಧಿಕನ್ನಡ ವಾರ್ತೆ
Goa(ಮಡಗಾಂವ): ಆನ್ ಲೈನ್ ಟ್ರೇಡಿಂಗ್ ನಲ್ಲಿ  (Online trading )ಹೂಡಿಕೆ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಲಾಭ ಕೊಡಿಸುವುದಾಗಿ ಆಮಿಷವೊಡ್ಡಿ ಮಡಗಾಂವ ನ ಮಹಿಳೆಯೋರ್ವರಿಗೆ 33,75,000 ರೂ ಮೋಸವೆಸಗಿರುವ ಕುರಿತಂತೆ ಗೋವಾ ಸೈಬರ್ ಕ್ರೈಂ ವಿಭಾಗವು (Goa Cyber ​​Crime) ಕರ್ನಾಟಕದ ಬೆಂಗಳೂರು ಮೂಲದ ಮೊಹಮ್ಮದ್ ರಫೀಜ್ (33) ಎಂಬ ಆರೋಪಿಯನ್ನು ಬಂಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಸಂಬಂಧಿತ ಮಹಿಳೆಗೆ ವಾಟ್ಸಾಪ್ ಮೂಲಕ “ಸೋಶಿಯಲ್ ವೆಂಚರ್ ಕ್ಯಾಪಿಟಲಿಸ್ಟ ಎಐ ಟ್ರೇಡಿಂಗ್”  (“Social Venture Capitalist AI Trading” ) ಹೆಸರಿನ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ಆರೋಪಿಯು ಈ ಮಹಿಳೆಯನ್ನು ಸಂಪರ್ಕಿಸಿದ್ದ. ಹೆಚ್ಚಿನ ಮೊತ್ತದ ಲಾಭ ಕೊಡಿಸುವುದಾಗಿ ಹೇಳಿ ಈ ಮಹಿಳೆಯ ವಿವಿಧ ಬ್ಯಾಂಕ್ ಖಾತೆಯಿಂದ 33,75,000 ರೂ ಹಣವನ್ನು ಹೂಡಿಕೆ ಮಾಡಿಸಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಮಾರ್ಚ 24 ರಂದು ಗೋವಾ ಸೈಬರ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಂಧಿತ ಆರೋಪಿಯ ಬ್ಯಾಂಕ್ ಖಾತೆಯು ಗೋವಾದಲ್ಲಿ ಹಾಗೂ ತಮಿಳುನಾಡಿನಲ್ಲಿ ನಡೆದಿರುವ ಇದೇ ರೀತಿಯ ಇನ್ನೂ ಎರಡು ಸೈಬರ್ ಅಪರಾಧಕ್ಕೆ ಸಂಬಂಧಿಸಿದೆ ಎಂಬುದು ಪೋಲಿಸರ ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಈ ಕುರಿತಂತೆ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.