ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಮತ್ತು ಕರ್ನಾಟಕ ಗಡಿ ಭಾಗ ಕೇರಿ-ಸತ್ತರಿ ತಾಲೂಕಿನಲ್ಲಿರುವ ವಜರಾ ಸಕಳಾ ಜಲಪಾತದಲ್ಲಿ ( Goa Vajra Sakala Falls)  ಕರ್ನಾಟಕದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದ್ದು, ಮೃತ ಯುವಕನ ಪತ್ತೆಗಾಗಿ ರಕ್ಷಣಾ ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ.

ವಿಜಯ್ ದೊಡ್ಮನಿ ಎಂಬ ಕರ್ನಾಟಕದ ಹುಬ್ಬಳ್ಳಿಯ (27) ನಿವಾಸಿಯಾಗಿರುವ (Vijay Dodmani (27) resident of Hubballi, Karnataka)  ಈತ ತನ್ನ ಸ್ನೇಹಿತರೊಂದಿಗೆ ಗೋವಾಕ್ಕೆ ಜಲಪಾತ ವೀಕ್ಷಣೆಗೆ ಬಂದಿದ್ದ, ಜಲಪಾತದ ನೀರಿನ ಆಳದ ಅರಿವಿಲ್ಲದೆಯೇ ಈಜುತ್ತಿದ್ದ ಸಂದರ್ಭದಲ್ಲಿ ಸಮತೋಲನ ತಪ್ಪಿ ನೀರಿನಲ್ಲಿ ಮುಳುಗು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ಗೋವಾದಲ್ಲಿ ಜಲಪಾತದಲ್ಲಿ ಬಿದ್ದು ಸಾವನ್ನಪ್ಪುತ್ತಿರುವ ಘಟನೆ ಮರುಕಳಿಸುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ಈ ಘಟನೆಯ ಕುರಿತು ಮಾಹಿತಿ ಲಭ್ಯವಾದ ಕೂಡಲೇ ಸ್ಥಳೀಯ ಗ್ರಾಮಸ್ಥರು, ಅಗ್ನಿಶಾಮಕ ದಳ, ಪೋಲಿಸ್ ಮತ್ತು ವಿಪತ್ತು ನಿರ್ವಹಣಾ ತಂಡ ಘಟನಾ ಸ್ಥಳಕ್ಕೆ ಆಗಮಿಸಿತು. ಈ ಜಲಪಾತದ ಕೆಳಭಾಗದಲ್ಲಿರುವ ಆಳವಾದ ಕಂದಕ, ದೊಡ್ಡ ಬಂಡೆಗಳು, ವೇಗವಾದ ನೀರಿನ ಹರಿವಿನಿಂದಾಗಿ ಮೃತ ವ್ಯಕ್ತಿಯ ಶೋಧ ಕಾರ್ಯಕ್ಕೆ ಅಡ್ಡಿಯುಂಟಾಗುತ್ತಿದೆ ಎನ್ನಲಾಗಿದೆ.

ಈ ದುರಾದೃಷ್ಠಕರ ಘಟನೆಯ ನಂತರ ಗೋವಾದಲ್ಲಿ ಜಲಪಾತಗಳಲ್ಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಹೆಚ್ಚುವಂತಾಗಿದೆ. ಮಳೆಗಾಲದಲ್ಲಿ ಒಮ್ಮೊಮ್ಮೆ ನೀರಿನ ಹರಿವು ಹಠಾತ್ತನೆ ಹೆಚ್ಚಾಗುವುದರಿಂದ ಅಂತಹ ಪ್ರವಾಸಿ ಸ್ಥಳಗಳಲ್ಲಿ ಎಚ್ಚರಿಕೆಯ ನಾಮಫಲಕ ಹಾಕುವುದು ಮತ್ತು ನಿರ್ಬಂಧಿತ ಪ್ರದೇಶಗಳ ಬಗ್ಗೆ ಸೂಚನಾ ಫಲಕ ಹಾಕುವುದು ಅತಿ ಮುಖ್ಯವಾಗಿದೆ ಎಂದು ಸ್ಥಳೀಯರು ಆಘ್ರಹಿಸಿದ್ದಾರೆ.