ಸುದ್ದಿ ಕನ್ನಡ ವಾರ್ತೆ
ಕಾರವಾರ:ನಗರದ ಕೆ ಎಚ್ ಬಿ ಬಡಾವಣೆಯಲ್ಲಿ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದ ಯುವ ಕಾರ್ಮಿಕನೊಬ್ಬ ಕೆಲಸದ ನಡುವೆಯೇ ವಿದ್ಯುತ್ ಶಾಕ್‌ಗೆ ಬಲಿಯಾದ ಹೃದಯವಿದ್ರಾವಕ ಘಟನೆ ಗುರುವಾರ ನಡೆದಿದೆ.
ಪದ್ಮನಾಭ ನಗರದ ನಿವಾಸಿ ಭರತ್ ಗೌಡ (30) ಮೃತ ದುರ್ದೈವಿ. ಕೆಎಚ್‌ಬಿ ಬಡಾವಣೆಯ ಮನೆಯೊಂದರಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ಅಳವಡಿಸಲಾಗಿದ್ದ ಪೆಂಡಾಲ್ ಅನ್ನು ತೆರವುಗೊಳಿಸುವ ಕಾರ್ಯದಲ್ಲಿ ಅವರು ತೊಡಗಿದ್ದರು. ಈ ವೇಳೆ ಪೆಂಡಾಲ್ ಮೇಲಿದ್ದ ತಗಡಿನ ಶೀಟನ್ನು ಕೆಳಗಿಳಿಸುವಾಗ ಅದು ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದು, ಭರತ್ ಅವರಿಗೆ ತೀವ್ರ ವಿದ್ಯುತ್ ಶಾಕ್ ತಗುಲಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಯಿ೦ದ ಕುಟುಂಬಸ್ಥರು ಹಾಗೂ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.ಕುಟುಂಬದ ಆಶಾಕಿರಣವಾಗಿದ್ದ ಯುವಕನ ಅಕಾಲಿಕ ನಿಧನದಿಂದ ಪದ್ಮನಾಭನಗರ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
