ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಜೀವನದಲ್ಲಿ ಚುನಾವಣಾ ಪ್ರಕ್ರಿಯೆ,ಮಹತ್ವ, ಮತದಾನ ಪ್ರಕ್ರಿಯೆ, ಮಹತ್ವ,ಶಾಲಾ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಸತ್ತಿನ ಚಟುವಟಿಕೆಗಳ ಜಾಗೃತಿ ಮೂಡಿಸುವ ಉದ್ದೇಶದಿಂದ 2026- 2027ನೇ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲು ಶಾಲಾ ಸಂಸತ್ತು ರಚನೆಯ ನಿಮಿತ್ತ ಗುರುವಾರ ಚುನಾವಣೆ ನಡೆದು ಮತದಾನ ಪ್ರಕ್ರಿಯೆಯ ಮೂಲಕ ಸಂಸತ್ತು ರಚನೆಗೊಂಡಿತು.

 

ಶಾಲಾ ಸಂಸತ್ತು ಚುನಾವಣೆ ನಡೆಸುವ ಸಂಬಂಧ ಅಧಿಸೂಚನೆ,ಚುನಾವಣಾ ದಿನಾಂಕವನ್ನು ಮೊದಲೇ ಒಂದು ವಾರದ ಮುಂಚೆ ಘೋಷಿಸಲಾಗಿತ್ತು. ಶಾಲೆಯ ಮುಖ್ಯ ಶಿಕ್ಷಕರು,ಮುಖ್ಯ ಚುನಾವಣಾಧಿಕಾರಿಗಳಾದ ಅನಿಲ ರಾಠೋಡರವರು ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಶಾಲಾ ಸಂಸತ್ತ ಚುನಾವಣೆಯ ಮೂಲಕ ಸಾರ್ವತ್ರಿಕ ಚುನಾವಣೆಯ ಪರಿಕಲ್ಪನೆಯನ್ನು ಮೂಡಿಸುವ ಉದ್ದೇಶದಿಂದ ಈ ಚುನಾವಣೆಯ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.ಚುನಾವಣೆ ಪ್ರಕ್ರಿಯೆಯ ವಿವರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ನೀಡಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಅನುಸರಿಸುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ನಾಮ ಪತ್ರಿಕೆ ಸಲ್ಲಿಕೆಗೆ ಕಾಲಾವಕಾಶ, ಪರಿಶೀಲನೆ, ಹಿಂಪಡೆಯುವಿಕೆ, ಪ್ರಚಾರ, ಮತದಾನ ಕೊಠಡಿ, ನಾಮಪತ್ರ ಸಲ್ಲಿಕೆ, ಶಾಹಿ,ಭದ್ರತೆಯ ಕೊಠಡಿ, ಫಲಿತಾಂಶ ಘೋಷಣೆ,ಪ್ರಮಾಣ ವಚನ ಭೋಧನೆ,ಮಂತ್ರಿ ಮಂಡಲ ರಚನೆಯ ಪ್ರತಿಜ್ಞಾ ವಿಧಿ ಸ್ವೀಕಾರ,ಬಂದೋಬಸ್ತ್ ವ್ಯವಸ್ಥೆ, ಗುರುತಿನ ಚೀಟಿಯಾಗಿ ಶಾಲಾ ಗುರುತಿನ ಚೀಟಿ,ಗುರುತಿನ ಚೀಟಿ ಇಲ್ಲದವರಿಗೆ ಆಧಾ‌ರ್ ಕಾರ್ಡನ್ನು ಬಳಸಲು ಅವಕಾಶ ನೀಡಲಾಯಿತು.

 

ಮತಗಟ್ಟೆ ಅಧಿಕಾರಿ,ಆರೋಗ್ಯ ಕಾರ್ಯಕರ್ತೆ,ಆಶಾ ಕಾರ್ಯಕರ್ತೆ ಮತದಾನ ಚಟುವಟಿಕೆಯಲ್ಲಿ ಸಹಕರಿಸಿದರು, ಒಟ್ಟು 34 ವಿದ್ಯಾರ್ಥಿಗಳು ಸಂತಸದಿಂದ ಸರತಿಯ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ವಿದ್ಯುನ್ಮಾನ ಮೊಬೈಲ್ ಆಪ್ ನಲ್ಲಿ ಮತ ಚಲಾಯಿಸಿದರು. ಚುನಾವಣೆಯ ಮುಖ್ಯ ಚುನಾವಣಾಧಿಕಾರಿಗಳಾದ ಮತಗಟ್ಟೆ ಅಧಿಕಾರಿಗಳಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ,ಸಹ ಶಿಕ್ಷಕರಾದ ಆನಂದ ಪಿ. ಹಾಗೂ ವಿದ್ಯಾ ಮೇಡಂ ಮುಕ್ತ,ನ್ಯಾಯ ಸಮ್ಮತ, ಪಾರದರ್ಶಕ ಚುನಾವಣಾ, ಮತದಾನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಶಾಲಾ ಸಂಸತ್ತಿನ ಮುಖ್ಯಮಂತ್ರಿಯಾಗಿ ವಿಘ್ನೇಶ ಸಂಜಯ ಗಾಂವಕರ (ಪ್ರಾರ್ಥನಾ ಮಂತ್ರಿ),ಉಪ ಮುಖ್ಯಮಂತ್ರಿ ಸಾರ್ಥಕಿ ಸದಾನಂದ ಮಾಜಾಳಕರ(ಗ್ರಂಥಾಲಯ,ಸಾಂಸ್ಕೃತಿಕ ಮಂತ್ರಿ),ಹೆಚ್ಚುವರಿ ಖಾತೆ, ನೇಹಾ ನಾಗೇಶ ಕಾಪೋಲಕರ ( ಆಹಾರ ಮಂತ್ರಿ), ರಾಜಸ ರಾಮನಾಥ ವಾಂತೇಕರ (ಕ್ರೀಡಾ ಮಂತ್ರಿ ಮತ್ತು ರಕ್ಷಣಾಮಂತ್ರಿ) ಸಂಚಿತಾ ಸಂಜಯ ಮಿರಾಶಿ(ಆರೋಗ್ಯ ಮಂತ್ರಿ),ರಾಜ ವಿಷ್ಣು ವಟ್ಲೇಕರ (ಸ್ವಚ್ಛತಾ ಮಂತ್ರಿ),ಕಾಜಲ ನಾರಾಯಣ ಮಾಜಾಳಕರ (ಹಣಕಾಸು ಮಂತ್ರಿ),ನಿಲಿಶಾ ನಾಮದೇವ ಮಿರಾಶಿ (ತೋಟಗಾರಿಕೆ ಮಂತ್ರಿ)ತಮ್ಮ ತಮ್ಮ ಜವಾಬ್ದಾರಿಗಳನ್ನು ಶಾಲಾ ಮಕ್ಕಳು ವಹಿಸಿಕೊಂಡರು. ಕೊನೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆಯ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.