ಸುದ್ದಿ ಕನ್ನಡ ವಾರ್ತೆ

ಶಿರಸಿ: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಶ್ರೀಧರನಗರ, ಶ್ರೀರಾಮ ಕಾಲೋನಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು. ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟ ಅನುಭವಿಸಿದರು.
ಮನೆಗಳೊಳಗೆ ನೀರು ನುಗ್ಗಿದ್ದರಿಂದ ಟಿವಿ, ಫ್ರಿಜ್, ವಾಷಿಂಗ್ ಮೆಷಿನ್ ಸೇರಿದಂತೆ ಹಲವು ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾದವು. ಗೃಹೋಪಯೋಗಿ ಸಾಮಗ್ರಿಗಳು, ಪೀಠೋಪಕರಣಗಳು ಹಾಗೂ ಅಗತ್ಯ ವಸ್ತುಗಳಿಗೂ ಹಾನಿಯಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಮಳೆ ನೀರಿನಲ್ಲಿ ಹಾವು ಹಾಗೂ ಚೇಳುಗಳು ತೇಲಿ ಬಂದ ಪರಿಣಾಮ ಸ್ಥಳೀಯರು ಆತಂಕಗೊಂಡರು. ರಾತ್ರಿ ವೇಳೆ ಮನೆಗಳಿಂದ ಹೊರಬರಲು ಸಹ ಭಯದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸಿದರು.

ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಹೂಳು ತುಂಬಿಕೊಂಡಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲ ಆರಂಭವಾದಾಗಲೆಲ್ಲ ಇದೇ ಪರಿಸ್ಥಿತಿ ಎದುರಾಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ನಗರಸಭೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ನಿವಾಸಿಗಳು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿ, ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ನಗರದ ಕೋಟೆಕೆರೆ ಕೂಡ ತುಂಬಿ ಹರಿಯುತ್ತಿದೆ.‌ಹುಬ್ಬಳ್ಳಿ ಮಾರ್ಗ ಇದರ ದಂಡೆಯ‌ ಮೇಲಿದ್ದು ಸಂಚಾರಕ್ಕೆ ಕೂಡ ಅಡಚಣೆ ಉಂಟಾಗಿದೆ.