Banner Ad

ಸುದ್ದಿ ಕನ್ನಡ ವಾರ್ತೆ
ಹಳಿಯಾಳ: ತಾಲೂಕಿನ ಪಾಂಡರವಾಳ ಗ್ರಾಮದಲ್ಲಿ ಮಂಗಳವಾರ ಸಂಜೆ ಪ್ರಕೃತಿಯ ಅಚ್ಚರಿಯೊಂದು ನಡೆದಿದೆ. ಭೀಕರ ಬೇಸಿಗೆಯ ನಡುವೆ ಅನಿರೀಕ್ಷಿತವಾಗಿ ಸಂಭವಿಸಿದ ಮೇಘ ಸ್ಫೋಟದ ಮಾದರಿಯ ಭಾರಿ ಮಳೆಗೆ ಗ್ರಾಮಸ್ಥರು ದಂಗಾಗಿದ್ದಾರೆ. ಕೇವಲ ಒಂದು ಗಂಟೆಯ ಕಾಲ ಸುರಿದ ಧಾರಾಕಾರ ಮಳೆಗೆ ಗ್ರಾಮದ ಬತ್ತುತ್ತಿದ್ದ ಕೆರೆ ಸಂಪೂರ್ಣವಾಗಿ ಮೈದುಂಬಿ ಹರಿದಿದೆ.

ಮಂಗಳವಾರ ಸಂಜೆ ಹಳಿಯಾಳ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ವರ್ಷಧಾರೆಯಾಗಿದ್ದು, ಹಲವೆಡೆ ಆಲಿಕಲ್ಲು ಮಳೆಯೂ ಆಗಿದೆ. ಆದರೆ ಪಾಂಡರವಾಳ ಗ್ರಾಮದಲ್ಲಿ ಮಳೆಯ ಆರ್ಭಟ ತೀವ್ರವಾಗಿತ್ತು. ಒಂದೇ ತಾಸು ಸುರಿದ ಮಳೆಗೆ ಇಡೀ ಗ್ರಾಮದ ಕೃಷಿ ಜಮೀನುಗಳು ಜಲಾವೃತಗೊಂಡವು. ಬೇಸಿಗೆಯ ಬಿಸಿಲಿಗೆ ಒಣಗುತ್ತಿದ್ದ ಭೂಮಿಗೆ ಈ ಮಳೆ ತಂಪು ನೀಡಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Banner Ad

ಸಾಮಾನ್ಯವಾಗಿ ಮುಂಗಾರು ಮಳೆಯ ಸಮಯದಲ್ಲಿ ತುಂಬುತ್ತಿದ್ದ ಕೆರೆ. ಬಿರು ಬೇಸಿಗೆಯ ಈ ಅವಧಿಯಲ್ಲಿ ಕೇವಲ ಒಂದು ಗಂಟೆಯ ಮಳೆಗೆ ಭರ್ತಿಯಾಗಿ ಕೋಡಿ ಹರಿದಿರುವುದು ಗ್ರಾಮಸ್ಥರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಬತ್ತಿ ಹೋಗುತ್ತಿದ್ದ ಕೆರೆಗೆ ಜೀವಕಳೆ ಬಂದಿರುವುದು ಹಾಗೂ ವಾತಾವರಣ ತಂಪಾಗಿರುವುದು ಗ್ರಾಮದಲ್ಲಿ ಹರ್ಷದ ವಾತಾವರಣ ನಿರ್ಮಿಸಿದೆ.

Banner Ad