ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ಉದ್ಯೋಗ ಅರಸಿ ಹೊರ ಜಿಲ್ಲೆಗಳಿಗೆ ತೆರಳಿ ಕೆಲಸ ಮಾಡುತ್ತಿರುವ ಯುವಜನತೆ ಹಾಗೂ ಅವರ ಪೋಷಕರನ್ನು ಬೆಚ್ಚಿಬೀಳಿಸುವಂಥ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಸ್ನೇಹ ಹಾಗೂ ಮಾನವೀಯತೆ ಮರೆತು ಬಂಗಾರದ ಸರಕ್ಕಾಗಿ ಸ್ನೇಹಿತೆಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ಇದಾಗಿದ್ದು,ಈ ಆರೋಪದಲ್ಲಿ ಅಂಕೋಲಾ ತಾಲೂಕಿನ ಕೇಣಿ ಗಜನಿಭಾಗ ಮೂಲದ ಸುಷ್ಮಾ ಅ. ನಾಯ್ಕ (30) ಎಂಬ ಮಹಿಳೆಯನ್ನು ಮಣಿಪಾಲ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಯುವತಿ ಯೋಗಿತಾ ಯಾನೆ ಯೋಗೇಶ್ವರಿ ಕೂಡ ಅಂಕೋಲಾ ಮೂಲದವರಾಗಿದ್ದು, ಇವರಿಬ್ಬರೂ ಮಣಿಪಾಲದ ಶಾಂತಿನಗರ ಸಮೀಪದ ಸುದರ್ಶನ ಕಾಂಪ್ಲೆಕ್ಸ್‌ನ ಅಕ್ಕಪಕ್ಕದ ಬಾಡಿಗೆ ಕೊಠಡಿಗಳಲ್ಲಿ ವಾಸವಾಗಿದ್ದರು. ಮಣಿಪಾಲ ಕೈಗಾರಿಕಾ ವಲಯದ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಬೈಂಡಿಂಗ್ ಕೆಲಸ ಮಾಡುತ್ತಿದ್ದ ಯೋಗಿತಾ, ನಾಗರತ್ನಾ ಹಾಗೂ ಗಗನಾ ಎಂಬ ಮೂವರು ಯುವತಿಯರು ಒಟ್ಟಿಗೆ ವಾಸವಾಗಿದ್ದರು. ಮೇ 12ರಂದು ರಾತ್ರಿ ನಾಗರತ್ನಾ ರತ್ನಾ ಮತ್ತು ಗಗನಾ ಕೆಲಸಕ್ಕೆ ತೆರಳಿದ್ದ ವೇಳೆ ಯೋಗಿತಾ ಒಬ್ಬಳೇ ರೂಮಿನಲ್ಲಿ ಇದ್ದಳು. ಇದೇ ವೇಳೆ ಪಕ್ಕದ ಕೊಠಡಿಯಲ್ಲಿ ವಾಸವಾಗಿದ್ದ, ಪರಿಚಿತೆಯಾದ ಸುಷ್ಮಾ ನಾಯ್ಕ ಯೋಗಿತಾಳ ರೂಮಿಗೆ ಬಂದು ಉಳಿದುಕೊಂಡಿದ್ದಳು ಎನ್ನಲಾಗಿದೆ. ಮೇ 13ರಂದು ಬೆಳಿಗ್ಗೆ ಕೆಲಸ ಮುಗಿಸಿ ಮರಳಿದ ಸ್ನೇಹಿತೆಯರು, ರೂಮಿನ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ ಹೋಗಿ ನೋಡಿದಾಗ ಯೋಗಿತಾ ತಲೆಗೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಪಕ್ಕದಲ್ಲೇ ತುಂಡಾದ ಸಿಮೆಂಟ್ ಕಲ್ಲು ಪತ್ತೆಯಾಗಿದ್ದು, ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಾಣೆಯಾಗಿತ್ತು. ತಕ್ಷಣ ಆಕೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಪೊಲೀಸರು ತನಿಖೆ ನಡೆಸಿ ಸುಷ್ಮಾಳನ್ನು ವಿಚಾರಣೆಗೆ ಒಳಪಡಿಸಿದಾಗ, ಯೋಗಿತಾಳ ಬಂಗಾರದ ಸರ ಹಾಗೂ ಕಿವಿಯೋಲೆಗಳ ಮೇಲೆ ಕಣ್ಣಿಟ್ಟಿದ್ದ ಆಕೆ, ಬೆಳಗಿನ ಜಾವ ನಿದ್ರೆಯಲ್ಲಿದ್ದ ಯೋಗಿತಾಳ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಪ್ರಜ್ಞಾಹೀನಳನ್ನಾಗಿ ಮಾಡಿ ಸುಮಾರು 8 ಗ್ರಾಂ ತೂಕದ ಬಂಗಾರದ ಸರವನ್ನು ದೋಚಿದ್ದಳು ಎಂಬುದು ಬೆಳಕಿಗೆ ಬಂದಿದೆ. ಸರವನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ವಿಚ್ಛೇದಿತೆಯಾಗಿರುವ ಸುಷ್ಮಾ ಆರ್ಥಿಕ ಸಂಕಷ್ಟದಲ್ಲಿದ್ದಳು ಎನ್ನಲಾಗುತ್ತಿದ್ದು, ಕೃತ್ಯಕ್ಕೆ ಹಲವು ದಿನಗಳಿಂದ ಸಂಚು ರೂಪಿಸಿದ್ದ ಆಕೆ ಆನ್‌ಲೈನ್ ಮೂಲಕ ಚಾಕು ಕೂಡ ಖರೀದಿಸಿದ್ದಾಳೆ ಎನ್ನಲಾಗಿದ್ದು ಇನ್ನಷ್ಟು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.