Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ: ತಾಲೂಕಿನ ಬನವಾಸಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ಬುಧವಾರ ಮುಂಜಾನೆ ಮನೆಯಲ್ಲಿ ಮಲಗಿದ್ದ ಅಣ್ಣ-ತಂಗಿಗೆ ಹಾವು ಕಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

ಮತ್ತೊಬ್ಬ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಸಹಸ್ರಳ್ಳಿಯ ಮಿಥುನ್ ಪುಟ್ಟಪ್ಪ ನಾಯ್ಕ (12) ಮೃತಪಟ್ಟ ದುರ್ದೈವಿ.​ಈತನ ತಂಗಿ ದೀಕ್ಷಾ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Banner Ad

​ತಂದೆಯ ಜೊತೆ ಮಕ್ಕಳಿಬ್ಬರು ಮಲಗಿದ್ದ ಸಂದರ್ಭದಲ್ಲಿ ಬುಧವಾರ ಮುಂಜಾನೆ ಸುಮಾರು 2:30ರ ವೇಳೆಗೆ ಎದ್ದು ವಾಂತಿ ಮಾಡಿಕೊಳ್ಳಲು ಯತ್ನಿಸಿದಾಗ ಗಾಬರಿಗೊಂಡ ತಂದೆ ಲೈಟ್ ಆನ್ ಮಾಡಿ ನೋಡಿದ್ದಾರೆ. ಈ ವೇಳೆ ಹಾವು ಕೋಣೆಯಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿದೆ. ತಕ್ಷಣವೇ ಮನೆಯವರು ಹಾಗೂ ಸ್ಥಳೀಯರ ಸಹಾಯದಿಂದ 108 ಆಂಬ್ಯುಲೆನ್ಸ್ ಮೂಲಕ ಮಕ್ಕಳನ್ನು ಶಿರಸಿಯ ಪಂಡಿತ್ ದೀನದಯಾಳ್ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
​ದೀನದಯಾಳ್ ಆಸ್ಪತ್ರೆಗೆ ತರುವಷ್ಟರಲ್ಲೇ ಬಾಲಕ ಮಿಥುನ್ ದೇಹಕ್ಕೆ ಹಾವಿನ ವಿಷ ತೀವ್ರವಾಗಿ ಹರಡಿ ಸ್ಥಿತಿ ಚಿಂತಾಜನಕವಾಗಿತ್ತು.

ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಬೇಕಾದ ಐಸಿಯು, ವೆಂಟಿಲೇಟರ್ ಹಾಗೂ ಮಕ್ಕಳ ತಜ್ಞರ ಸೌಲಭ್ಯ ಇಲ್ಲದ ಕಾರಣ, ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮಣಿಪಾಲ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು, ದುರದೃಷ್ಟವಶಾತ ಮಾರ್ಗ ಮಧ್ಯದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.
​ಮತ್ತೊಬ್ಬ ಸಂತ್ರಸ್ತೆ, ಬಾಲಕಿ ದೀಕ್ಷಾ ನಾಯ್ಕಗೆ ಪಂಡಿತ ದೀನದಯಾಳ ಆಸ್ಪತ್ರೆಯಲ್ಲೇ ಸದ್ಯ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಎಂ. ಜಿ. ಕುಂಬಾರ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Banner Ad