Banner Ad

ಸುದ್ದಿ ಕನ್ನಡ ವಾರ್ತೆ

ಪ್ರೇಮಕ್ಕೆ ಭಾಷೆಯ ಅಗತ್ಯವಿಲ್ಲ. ಭಾವನೆಗಳೇ ಅದರ ನಿಜಾದ ಭಾಷೆ ಎಂಬುದನ್ನು ಈ ಮೂಕ-ಮೂಕಿ ಜೋಡಿ ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಮಾತು ಕೇಳಿಸದಿದ್ದರೂ, ಮಾತು ಆಡಲಾಗದಿದ್ದರೂ ಪರಸ್ಪರರ ಮನಸ್ಸು ಅರ್ಥಮಾಡಿಕೊಂಡು, ಪ್ರೀತಿ ಬಂಧನದಲ್ಲಿ ಒಂದಾದ ಈ ಜೋಡಿಯ ಕಥೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.

Banner Ad

ಬನಹಟ್ಟಿಯ ಆದಿಬಣಜಿಗ ಸಮಾಜದ ಮಲ್ಲಿಕಾರ್ಜುನ ಮಿರ್ಜಿ(೨೫) ರಾಯಭಾಗ ತಾಲೂಕಿನ ನಿಪನ್ಯಾಳ ಗ್ರಾಮದ ಮರಾಠ ಸಮುದಾಯದ ಅಮೃತಾ ಕುರಣಿ(೧೯) ಪ್ರೇಮ ವಿವಾಹ ದಂಪತಿ.

ಜಮಖಂಡಿಯ ಕಿವುಡ ಮತ್ತು ಮೂಕರ ವಸತಿ ವಿಶೇಷ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ನಂತರ ಮೈಸೂರಿನಲ್ಲಿ ಇದೇ ವಿಶೇಷ ಪದವಿ ಕಾಲೇಜಿನಲ್ಲಿ ಶಿಕ್ಷಣ ಕಲಿಯುವಾಗ ಪ್ರೀತಿ ಮತ್ತಷ್ಟು ಗಟ್ಟಿಯಾಗಿ ವಿವಾಹಕ್ಕೆ ಕಾರಣವಾಯಿತು.

ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾ ಬೆಳೆದ ಇವರಿಬ್ಬರು, ತಮ್ಮ ದೈಹಿಕ ನ್ಯೂನತೆಯನ್ನು ಎಂದಿಗೂ ದುರ್ಬಲತೆಯಾಗಿ ಪರಿಗಣಿಸಲಿಲ್ಲ. ಸಂಜ್ಞಾ ಭಾಷೆ, ಮುಖಭಾವ ಮತ್ತು ಹೃದಯದ ಭಾವನೆಗಳ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸ್ನೇಹ ಬೆಳೆಸಿಕೊಂಡರು. ಆ ಸ್ನೇಹ ಕ್ರಮೇಣ ಪ್ರೀತಿಯಾಗಿ ಮಾರ್ಪಟ್ಟು, ಪರಸ್ಪರ ವಿಶ್ವಾಸ, ಗೌರವ ಮತ್ತು ಆತ್ಮೀಯತೆಯ ಬಾಂಧವ್ಯವನ್ನು ಗಟ್ಟಿಗೊಳಿಸಿತು.

ಸಮಾಜದಲ್ಲಿ ಇನ್ನೂ ಅನೇಕರು ದೈಹಿಕ ನ್ಯೂನತೆಯುಳ್ಳವರ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿರುವ ಈ ಸಂದರ್ಭದಲ್ಲಿ ಈ ಜೋಡಿ ತಮ್ಮ ಪ್ರೇಮ ವಿವಾಹದ ಮೂಲಕ ಎಲ್ಲರಿಗೂ ಹೊಸ ಸಂದೇಶವನ್ನು ನೀಡಿದ್ದಾರೆ. ನಿಜವಾದ ಪ್ರೀತಿ ಎಂದರೆ ರೂಪ, ಹಣ ಅಥವಾ ದೈಹಿಕ ಸಾಮರ್ಥ್ಯವಲ್ಲ. ಹೃದಯಗಳ ಸಂಗಮ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಎಂಬುದನ್ನು ಅವರು ತೋರಿಸಿದ್ದಾರೆ.

ವಿವಾಹ ನೊಂದಣಿ: ಪಂಚರ ಸಮ್ಮುಖದಲ್ಲಿ ಕಳೆದ ಮೇ ೧೦, ೨೦೨೬ ರಂದು ತೇರದಾಳದ ಉಪನೊಂದಣಿ ಇಲಾಖೆಯಲ್ಲಿ ವಿವಾಹ ನೊಂದಣಿಯಾಗಿದ್ದಾರೆ. ನಂತರದ ದಿನಗಳಲ್ಲಿ ಕುಟುಂಬಸ್ಥರ ವಿರೋಧದ ನಡುವೆಯೂ ಬದುಕು ಸಾಗಿಸಿದರು. ನಂತರ ದಿನಗಳಲ್ಲಿ ರಾಜಿ ಸಂಧಾನದ ಮೂಲಕ ಉಭಯ ಕುಟುಂಬಗಳ ಪರಸ್ಪರ ಒಪ್ಪಿಗೆಯೊಂದಿಗೆ ನಾಳೆ ದಿ.೨೫ ರಂದು ರಬಕವಿ-ಬನಹಟ್ಟಿಯಲ್ಲಿ `ಮದುವೆ ಆರತಕ್ಷತೆ’ ಕಾರ್ಯಕ್ರಮ ಜರುಗುತ್ತಿದೆ.

Banner Ad