ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ:ತಾಲೂಕಿನ ನಂದೊಳ್ಳಿ ಗ್ರಾಮದ ಯುವಕ ಶಶಾಂಕ ಶಾಂತಾರಾಮ ಗೌಡ ಬಡತನ, ಸಂಕಷ್ಟ ಮತ್ತು ಜೀವನದ ಕಠಿಣ ಸವಾಲುಗಳು ಕನಸುಗಳಿಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ಆಟೋ ಚಾಲಕರಾಗಿದ್ದ ತಂದೆಯ ಕನಸನ್ನು ನನಸು ಮಾಡುವ ಮೂಲಕ ಶಶಾಂಕ ಅವರು ಇಂದು ಎಂ.ಬಿ.ಬಿ.ಎಸ್ ಪದವಿ ಪಡೆದು ವೈದ್ಯರಾಗಿ ಹೊರಹೊಮ್ಮಿದ್ದಾರೆ.

​ನಂದೊಳ್ಳಿಯ ಜನತಾ ಕಾಲೋನಿಯ ನಿವಾಸಿಯಾಗಿರುವ ಶಶಾಂಕ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೇ ಪೂರ್ಣಗೊಳಿಸಿದ್ದರು. ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ ಹೊಂದಿದ್ದ ಅವರು, ಉನ್ನತ ಶಿಕ್ಷಣದ ಕನಸಿನೊಂದಿಗೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡಿ, ಬಳಿಕ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಬೆಂಗಳೂರಿನ ವೈದೇಹಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಕೋರ್ಸ್‌ಗೆ ಪ್ರವೇಶ ಪಡೆದರು.
​ಶಶಾಂಕ ಅವರ ತಂದೆ ಶಾಂತಾರಾಮ ನಾಗಪ್ಪ ಗೌಡ ಅವರು ಆಟೋ ಚಾಲಕರಾಗಿ ದುಡಿದು ಕುಟುಂಬವನ್ನು ಸಾಗಿಸುತ್ತಿದ್ದರು. ತಮ್ಮ ಮಗ ವೈದ್ಯನಾಗಬೇಕು ಎಂಬ ಕನಸನ್ನು ಅವರು ಹೃದಯದಲ್ಲಿ ಇಟ್ಟುಕೊಂಡಿದ್ದರು. ಆರ್ಥಿಕ ಸಂಕಷ್ಟಗಳ ನಡುವೆಯೂ ಮಗನ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಶ್ರಮಿಸುತ್ತಿದ್ದರು. ಆದರೆ ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಅವರು ಅಕಾಲಿಕವಾಗಿ ನಿಧನರಾದರು.

​ತಂದೆಯ ಅಗಲಿಕೆ ಶಶಾಂಕ ಅವರ ಜೀವನದಲ್ಲಿ ದೊಡ್ಡ ಆಘಾತವಾಗಿತ್ತು. ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಕೆಲಕಾಲ ಓದನ್ನೇ ನಿಲ್ಲಿಸಿ ಮನೆಗೆ ಮರಳುವ ಪರಿಸ್ಥಿತಿಯೂ ಎದುರಾಗಿತ್ತು. ಆದರೂ ತಂದೆಯ ಕನಸನ್ನು ಸಾಕಾರಗೊಳಿಸಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಅವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು.ಈ ಹೋರಾಟದ ಹಾದಿಯಲ್ಲಿ ತಾಯಿ ಸವಿತಾ ಶಾಂತಾರಾಮ ಗೌಡ, ಅಕ್ಕ ಹಾಗೂ ಕುಟುಂಬದ ಸದಸ್ಯರು ಶಶಾಂಕ ಅವರಿಗೆ ಬೆನ್ನೆಲುಬಾಗಿ ನಿಂತರು. ಕುಟುಂಬದ ತ್ಯಾಗ, ಪ್ರೋತ್ಸಾಹ ಮತ್ತು ಶಶಾಂಕ ಅವರ ನಿರಂತರ ಪರಿಶ್ರಮದ ಫಲವಾಗಿ ಅವರು 24ನೇ ವಯಸ್ಸಿನಲ್ಲಿ ಯಶಸ್ವಿಯಾಗಿ ಎಂ.ಬಿ.ಬಿ.ಎಸ್ ಪದವಿ ಪೂರ್ಣಗೊಳಿಸಿದ್ದಾರೆ. ಸದ್ಯ ವೈದ್ಯಕೀಯ ತರಬೇತಿಯಲ್ಲಿ ನಿರತರಾಗಿದ್ದು, ಶೀಘ್ರದಲ್ಲೇ ಜನಸೇವೆಯ ಕನಸನ್ನು ನನಸು ಮಾಡಲು ಸಜ್ಜಾಗಿದ್ದಾರೆ.

​ನಂದೊಳ್ಳಿಯ ಜನತಾ ಕಾಲೋನಿಯಿಂದ ವೈದ್ಯಕೀಯ ಪದವಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಶಾಂಕ ಅವರ ಸಾಧನೆ ಇಂದು ಗ್ರಾಮಕ್ಕೆ ಮಾತ್ರವಲ್ಲ, ಇಡೀ ಯಲ್ಲಾಪುರ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಸದಾ ನಗುಮುಖದ, ಸರಳ ಸ್ವಭಾವದ ಶಶಾಂಕ ಅವರ ಸಾಧನೆ ಅನೇಕ ಯುವಕರಿಗೆ ಸ್ಪೂರ್ತಿಯಾಗಿದೆ.

​ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಬಡತನ ಮತ್ತು ಸಂಕಷ್ಟಗಳನ್ನು ಮೀರಿ ವೈದ್ಯರಾಗಿರುವ ಶಶಾಂಕ ಗೌಡ ಅವರ ಯಶೋಗಾಥೆ, ಗುರಿ ಸಾಧಿಸಲು ದೃಢ ಸಂಕಲ್ಪ ಮತ್ತು ಪರಿಶ್ರಮವೇ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ತಂದೆಯ ಕನಸಿಗೆ ಜೀವ ತುಂಬಿದ ಈ ಯುವ ವೈದ್ಯರ ಮುಂದಿನ ಜೀವನ ಇನ್ನಷ್ಟು ಯಶಸ್ಸು, ಸೇವಾ ಮನೋಭಾವ ಮತ್ತು ಸಾಧನೆಗಳಿಂದ ಕೂಡಿರಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ.