ಸುದ್ದಿ ಕನ್ನಡ ವಾರ್ತೆ

​ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಯಶವಂತಪುರ-ಶಿವಮೊಗ್ಗ ಟೌನ್ ನಡುವೆ ಸಂಚರಿಸುವ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು (16581/16582) ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಈ ಕುರಿತು ಶಿರಸಿ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರ ಹಿತದೃಷ್ಟಿಯಿಂದ ವಿಶೇಷ ರೈಲು ಸೌಲಭ್ಯ ಒದಗಿಸುವಂತೆ ನಾನು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೆ. ನನ್ನ ಮನವಿಗೆ ತಕ್ಷಣ ಸ್ಪಂದಿಸಿ, ಭಕ್ತರಿಗೆ ಅನುಕೂಲ ಮಾಡಿಕೊಟ್ಟಿರುವ ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನಾನು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

​ಅದರಂತೆ ಮಾರ್ಚ್ 1ರ ಭಾನುವಾರದಂದು ಯಶವಂತಪುರದಿಂದ ಮಧ್ಯರಾತ್ರಿ 12.15ಕ್ಕೆ ಹೊರಡುವ ರೈಲು ಸಂಖ್ಯೆ 16581 ಶಿವಮೊಗ್ಗದ ಬದಲಾಗಿ ಬೆಳಿಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ತಾಳಗುಪ್ಪದಿಂದಲೇ ತನ್ನ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16582 ಮರುದಿನ ಬೆಳಿಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ. ಸಾರ್ವಜನಿಕರು ಹಾಗೂ ಶಿರಸಿ ಮಾರಿಕಾಂಬಾ ದೇವಿಯ ಭಕ್ತಾದಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರು ಉತ್ತರ ಕನ್ನಡ.