Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ನಗರದ ಸುಂಕೇರಿ ವ್ಯಾಪ್ತಿಯ ಕಠಿಣಕೋಣದ ಮನೆಯೊಂದರ ಆವರಣದಲ್ಲಿ ರವಿವಾರ ಒಟ್ಟೂ 6 ಹೆಬ್ಬಾವುಗಳು ಕಾಣಿಸಿಕೊಂಡು ಅಚ್ಚರಿಯೊಂದಿಗೆ ಮನೆಯವರಿಗೆ ಆತಂಕ ಮೂಡಿಸಿದ ಘಟನೆ ನಡೆದಿದೆ.

ವಿಜಯ ತಳೇಕರ ಎಂಬುವವರ ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ರಚನೆಗೆ ದಾಸ್ತಾನಿಟ್ಟಿದ್ದ ಕಬ್ಬಿಣದ ಸಾಮಗ್ರಿಗಳ ನಡುವೆ ಹೆಬ್ಬಾವುಗಳು ಪತ್ತೆಯಾಗಿದ್ದವು. ತಕ್ಷಣ ಸ್ಥಳೀಯರು ಉರಗ ರಕ್ಷಣೆ ಮಾಡುವ ಅರಣ್ಯ ಇಲಾಖೆಯ ಗಸ್ತು ವನಪಾಲಕ ಗೋಪಾಲ ನಾಯ್ಕ ಅವರಿಗೆಮಾಹಿತಿ ನೀಡಿದ್ದಾರೆ. ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿದ ಅವರು ಎಲ್ಲ 6 ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿದರು. ಸೆರೆಯಾದ ಹೆಬ್ಬಾವುಗಳು 8 ರಿಂದ 12 ಅಡಿ ಉದ್ದದವರೆಗೆ ಇದ್ದವು. ಇವುಗಳಲ್ಲಿ 3 ಗಂಡು ಹಾಗೂ 3 ಹೆಣ್ಣು ಹೆಬ್ಬಾವುಗಳಿದ್ದವು. ಬಳಿಕ ಅವುಗಳನ್ನು ಜನ ವಸತಿ ಇಲ್ಲದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಗೋಪಾಲ ನಾಯ್ಕ ತಿಳಿಸಿದರು.

Banner Ad

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು ಬೇಸಿಗೆಯ ಆರಂಭ ಸಂತಾನೋತ್ಪತ್ತಿಗಾಗಿ ಎಲ್ಲ ಜಾತಿಯ ಹಾವುಗಳ ಮಿಲನಕ್ರಿಯೆಯ ಸಮಯವಾಗಿದೆ. ಹೆಣ್ಣು ಹಾವಿನ ಇರುವಿಕೆಯನ್ನು ಹುಡುಕಿಕೊಂಡು ಗಂಡು ಹಾವುಗಳು ಬರುವುದು ಸಹಜ. ಹೀಗಾಗಿ, ಒಂದೇ ಕಡೆ ಇಷ್ಟೊಂದು ಸಂಖ್ಯೆಯಲ್ಲಿ ಹಾವು ಕಾಣಿಸಿಕೊಂಡಿವೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಒಂದೇ ಕಡೆ ರಾಶಿ ಹಾಕಿರುವ ವಸ್ತುಗಳನ್ನು ತೆಗೆಯುವಾಗ ಎಚ್ಚರಿಕೆ ವಹಿಸಬೇಕು. ತೋಟದಲ್ಲಿ, ಮನೆಯ ಆವರಣದಲ್ಲಿ ಹಾಗೂ ತರಗೆಲೆ ಸೇರಿದಂತೆ ತ್ಯಾಜ್ಯಗಳು ಇರುವ ಪ್ರದೇಶದಲ್ಲಿ ಶೂ ಧರಿಸಿಕೊಂಡೇ ಹೋಗಬೇಕು. ಹಾವುಗಳು ಎಲ್ಲೇ ಕಂಡು ಬಂದರೂ ತಕ್ಷಣ ಅರಣ್ಯ ಇಲಾಖೆಗೆ ಅಥವಾ ಉರಗ ರಕ್ಷಕರಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

Banner Ad