ಸುದ್ದಿ ಕನ್ನಡ ವಾರ್ತೆ
ಶಿರಸಿ: ಉತ್ತರಕನ್ನಡ ಜಿಲ್ಲೆಯ ಮಾರಕ ಯೋಜನೆಯಾದ ಬೇಡ್ತಿ-ವರದಾ ನದ ಜೋಡಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಪತ್ರವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ನದಿಗಳಲ್ಲಿ ಬೇಸಿಗೆಯ ಸಂದರ್ಭದಲ್ಲಿ ಎಷ್ಟು ನೀರು ಹರಿಯುತ್ತದೆ ಎಂಬ ಮಾಹಿತಿಯೇ ಇಲ್ಲವೆಂದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತಿಳಿಸಿರುವುದು ನದಿಯಲ್ಲಿ ನೀರಿನ ಲಭ್ಯತೆಯ ಲೆಕ್ಕಾಚಾರ ಇಲ್ಲದೆಯೇ ಬೇರೆಡೆ ನೀರು ವರ್ಗಾವಣೆ ಮಾಡುವ ಬೃಹತ್ ಯೋಜನೆ ರೂಪಿಸಿಇದ್ದು ಹೇಗೆ …? ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಪ್ರಶ್ನೆ ಮುಂದಿಟ್ಟಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಶಿರಸಿಯ ಹಿರಿಯ ವೈದ್ಯ ಡಾ. ರವಿಕಿರಣ್ ಪಟ್ವರ್ಧನ ಅವರಿಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಕಳುಹಿಸಿರುವ ಮಾಹಿತಿ ಪತ್ರದಲ್ಲಿ, ಬೇಡ್ತಿ-ಗಂಗಾವಳಿ ನದಿಯ ಅಧ್ಯಯನ ತನ್ನ ಕಾರ್ಯವ್ಯಾಪ್ತಿಗೆ ಸಂಬಂಧಿಸದ ಕಾರಣ ಆ ನದಿಯ ನೀರಿನ ಹರಿವಿನ ಮಾಹಿತಿ ತನ್ನ ಬಳಿ ಲಭ್ಯವಿಲ್ಲ ಎಂದು ತಿಳಿಸಿರುವುದಾಗಿ ಸಮಿತಿ ಹೇಳಿದೆ.
ನದಿಯ ನೀರಿನ ಲಭ್ಯತೆಯೇ ಸ್ಪಷ್ಟವಿಲ್ಲದಿರುವಾಗ ಯೋಜನೆಯ ರೂಪುರೇಷೆಗಳನ್ನು ಯಾವ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತಿದೆ ಎಂಬ ಅನುಮಾನಕ್ಕೆ ಈ ಪತ್ರ ಎಡೆಮಾಡಿಕೊಟ್ಟಿದೆ.
ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ನದಿಗಳು ತುಂಬಿ ಹರಿಯುವುದನ್ನೇ ಆಧಾರವಾಗಿಟ್ಟುಕೊಂಡು ನೀರಿನ ಲಭ್ಯತೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ನದಿಯ ಹರಿವು ಎಷ್ಟಿರುತ್ತದೆ, ಬರಗಾಲದ ವರ್ಷಗಳಲ್ಲಿ ನೀರಿನ ಪ್ರಮಾಣ ಎಷ್ಟಿರುತ್ತದೆ, ಕುಡಿಯುವ ನೀರು, ಕೃಷಿ, ಅರಣ್ಯ, ಅಂತರ್ಜಲ ಮರುಪೂರಣ ಮತ್ತು ನದಿಯ ಜೀವವ್ಯವಸ್ಥೆಗೆ ಅಗತ್ಯವಾದ ನೀರನ್ನು ಉಳಿಸಿದ ಬಳಿಕ ಬೇರೆಡೆಗೆ ವರ್ಗಾಯಿಸಲು ಎಷ್ಟು ನೀರು ಲಭ್ಯವಿರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕಾಗುತ್ತದೆ.
ಬೇಡ್ತಿ-ವರದಾ ನದಿ ಜೋಡಣೆಗೆ ಸಂಬಂಧಿಸಿದಂತೆ ಮೂಲಭೂತ ಮಾಹಿತಿಯಿಲ್ಲದೆ ನೀರನ್ನು ಎತ್ತುವ ವ್ಯವಸ್ಥೆ, ಜಲಾಶಯದ ಸಾಮಥ್ರ್ಯ, ವಿದ್ಯುತ್ ವೆಚ್ಚ ಮತ್ತು ನೀರು ಸಾಗಿಸುವ ಮಾರ್ಗದ ಬಗ್ಗೆ ಲೆಕ್ಕಾಚಾರ ಹಾಕುವುದಾದರೆ, ಆ ಲೆಕ್ಕಾಚಾರಗಳ ವಿಶ್ವಾಸಾರ್ಹತೆಯನ್ನು ಹೇಗೆ ಒಪ್ಪಿಕೊಳ್ಳಬೇಕು ಎಂಬ ಪ್ರಶ್ನೆ ಎದುರಾಗುತ್ತದೆ.
