ಸುದ್ದಿ ಕನ್ನಡ ವಾರ್ತೆ
ಶಿರಸಿ: ನಾಡಿನಲ್ಲಿ ಉತ್ತಮ ಮಳೆಯಾಗಿ ಕೃಷಿಕರು ಸೇರಿದಂತೆ ಸಮಸ್ತ ಜೀವಜಗತ್ತಿಗೆ ಸುಭಿಕ್ಷೆ ಉಂಟಾಗಲಿ ಎಂಬ ಸಂಕಲ್ಪದೊಂದಿಗೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ‘ಕಾರೀರಿ ಇಷ್ಟಿ’ ಎಂಬ ಅಪರೂಪದ ಶ್ರೌತಯಾಗ ಆರಂಭಗೊಂಡಿದೆ.
ಈ ವರ್ಷ ಮಳೆಯ ಅಭಾವದಿಂದ ಕೃಷಿಕರು ಹಾಗೂ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕೃತಿಯ ಅನುಗ್ರಹಕ್ಕಾಗಿ ವೈದಿಕ ಪರಂಪರೆಯ ಪ್ರಕಾರ ಕಾರೀರಿ ಇಷ್ಟಿ ಯಾಗವನ್ನು ನೆರವೇರಿಸಲಾಗುತ್ತಿದೆ. ಸ್ವರ್ಣವಲ್ಲಿ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ 6 ರಿಂದ 9ರವರೆಗೆ ಈ ಯಾಗ ನಡೆಯಲಿದೆ.
ಮಳೆಯಗಾಗಿ ಪ್ರಾರ್ಥಿಸುವ ಈ ವೈದಿಕ ಅನುಷ್ಠಾನದಲ್ಲಿ ಪರ್ಜನ್ಯ, ಇಂದ್ರ, ವರುಣ ಹಾಗೂ ಮರುತ್ ದೇವತೆಗಳನ್ನು ಆವಾಹಿಸಿ ನಾಡಿನಲ್ಲಿ ಸುವುಷ್ಟಿಯಾಗಲಿ, ಸಮಸ್ತ ಜನರಿಗೆ ಕ್ಷೇಮ ಹಾಗೂ ಸುಭಿಕ್ಷೆ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತಿದೆ. ಆ.6ರಿಂದ 9ರವರೆಗೆ ಸೋಂದಾದ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ನಡೆಯುವ ಈ ಪವಿತ್ರ ಯಾಗದಲ್ಲಿ ಭಕ್ತಾದಿಗಳು ಪಾಲ್ಗೊಂಡು ಯಜ್ಞದರ್ಶನ ಪಡೆದು, ಶ್ರೀಚರಣಗಳ ದಿವ್ಯಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
