ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ಭಾರತೀಯ ಜನತಾ ಪಾರ್ಟಿ ಜೊಯಿಡಾ ಮಂಡಲದಿಂದ ಸೋಮವಾರ ತಾಲೂಕಿನ ಕಾತೇಲಿ/(ಕುಂಬಾರವಾಡ )ಗ್ರಾಮ ಪಂಚಾಯತದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಿ ಪಿ.ಡಿ.ಓ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಾತೇಲಿ ಗ್ರಾಮ ಪಂಚಾಯತ್ ಹಿಂದಿನ ಉಪಾಧ್ಯಕ್ಷರು ಮಾತನಾಡಿ ಅರಣ್ಯ, ಬೆಟ್ಟ, ಸರ್ಕಾರಿ ಭೂಮಿ,ಗಾವ್ಠಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಮನೆಗಳ ಆಸ್ತಿ ತೆರಿಗೆ ಸ್ವೀಕಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಅರಣ್ಯ, ಸರ್ಕಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ, ತಲೆತಲಾಂತರಗಳಿಂದ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿದ್ದು, ಸರ್ಕಾರದ ಈ ಕ್ರಮದಿಂದ ಅಂತಹ ಕುಟುಂಬಗಳಿಗೆ ತೊಂದರೆಯಾಗಲಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಈ ಜನವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಶಾಂತಾರಾಮ ಕಾಮತ, ರವಿದಾಸ ಗಾವಡಾ, ರಮೇಶ ವೇಳಿಪ್, ನಾರಾಯಣ ವೇಳಿಪ್ , ವಿಠಲ ಶೇಳಪೆಕರ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಊರಿನ ಸುಮಾರು ಎರಡು ನೂರಕ್ಕೂ ಹೆಚ್ಚು ಸಂಖ್ಯೆಯ ಗ್ರಾಮಸ್ತರು, ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.