ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನ ಕುಣುಬಿ ಸಮಾಜ ದಿಂದ ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ನಿರ್ಣಯಿಸಿದ ನಿರ್ಣಯ ಹೀಗಿದೆ.
ತಾಲೂಕಿನಲ್ಲಿ ಬಹುಸಂಖ್ಯಾತ ಹಿಂದುಳಿದ ಬುಡಕಟ್ಟು ಕುಣಬಿ ಜನಾಂಗ ವಾಸಿಸುತ್ತಿದ್ದಾರೆ. ಈ ಜನಾಂಗ ರಾಜಕೀಯವಾಗಿ ಬೆಳೆಸುವ ಬದಲು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಕಡೆಗಣಿಸುತ್ತಲೇ ಬಂದಿವೆ. ಬರುವ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕುಣಬಿ ಸಮಾಜದ ಅಭ್ಯರ್ಥಿಗೆ ಪ್ರವರ್ಗ 1 ಮತ್ತು ಸಾಮಾನ್ಯ ಕ್ಷೇತ್ರ ಇರುವ ಕಡೆ ಬಿ ಫಾರ್ಮ್ ನೀಡುವುದು ಮತ್ತು ಆದ್ಯತೆ ನೀಡಿಸ್ಪರ್ಧೆ ಮಾಡಲು ಅವಕಾಶ ನೀಡದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಖಚಿತ ಎಂದು ತಾಲ್ಲೂಕು ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೆಳಿಪ ಹೇಳಿದರು.
ಅವರು ಜೊಯಿಡಾ ಕುಣಬಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ 60 ಸಾವಿರ ಜನಸಂಖ್ಯೆ ಇದೆ. ಜೊಯಿಡಾ ತಾಲೂಕಿನಲ್ಲಿ ಬಹುಸಂಖ್ಯಾತ ಜನರಿದ್ದಾರೆ. ರಾಜಕೀಯ ಒಂದು ಶಕ್ತಿ, ಕುಣಬಿ ಗಳಲ್ಲಿ ರಾಜಕೀಯ ನಾಯಕತ್ವ ಬೆಳೆಯಬೇಕು. ಕೇವಲ ಚುನಾವಣೆ ಬಂದಾಗ ಕುಣಬಿ ನಾಯಕರನ್ನು ಪ್ರಚಾರಕ್ಕೆ ಬಳಸುವುದು ನಿಲ್ಲಬೇಕು. ಈ ಹಿಂದೆ ವಸಂತ ಅಸ್ನೋಟಿಕರ್ ಶಾಸಕರಾಗಿದ್ದಾಗ ಕುಣಬಿ ಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿ ನಾಯಕರನ್ನಾಗಿ ಬೆಳೆಸಿದ್ದರು. ಆದರೆ ಕಳೆದ 10 ವರ್ಷಗಳಲ್ಲಿ ಕುಣಬಿ ಗಳನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಪ್ರಯತ್ನ ನಡೆಯುತ್ತಿದೆ. ಕುಣಬಿ ಬಹುಸಂಖ್ಯಾತರಾಗಿದ್ದರು ಕೇವಲ ಬೆರಳೆಣಿಕೆಯಷ್ಟು ಇರುವ ಜನರನ್ನು ರಾಜಕೀಯ ನಾಯಕರನ್ನಾಗಿ, ಗುತ್ತಿಗೆದಾರನನ್ನಾಗಿ ಬೆಳೆಸಿ ಕುಣಬಿಗಳಿಗೆ ಮೋಸ ಮಾಡಲಾಗಿದೆ. 2015 ರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅವಕಾಶ ಇದ್ದರೂ ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳು ಕುಣಬಿ ಗಳನ್ನು ಕಡೆಗಣಿಸಿದ್ದಾರೆ. ಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅದೇ ಪ್ರಯತ್ನ ನಡೆಯುತ್ತಿದೆ. ಕುಣಬಿ ಗಳಿಗೆ ಏನು ಮಾಡಿದರೆ ನಡೆಯುತ್ತಿದೆ, ಹಣ ಇದ್ದವರಿಗೆ ಮಾತ್ರ ಪಕ್ಷದ ಟಿಕೆಟ್ ಎನ್ನುವ ಭ್ರಮೆ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಇದ್ದರೆ ಈ ಸಲದ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಹೇಳಿದರು.
ಬಡವರ ಸಮಸ್ಯೆ ಮಾತನಾಡಲು ಅದೇ ಜನಾಂಗದಿಂದ ರಾಜಕೀಯ ನಾಯಕರು ಬೆಳೆಯಬೇಕು. ತಾಲೂಕಿನಲ್ಲಿ ಅರಣ್ಯ ಅತಿಕ್ರಮಣ, ಕುಮರಿ ಜಮಿನು, ನಿರುದ್ಯೋಗಿ, ಬಡತನ ತಾಂಡವ ಆಡುತ್ತಿದೆ. ಕುಣಬಿ ಗಳು ಪರಿಶಿಷ್ಟ ಪಂಗಡಕ್ಕೆ ಸೇರುವ ಕೆಲಸ ಆಗಬೇಕು. ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ಸೇತುವೆ,ರಾಮನಗರ ನಿರಾಶ್ರೀತರ ಸಮಸ್ಯೆ, ಅರಣ್ಯ ಇಲಾಖೆ ತೊಂದರೆ, ಕಿರು ಉತ್ಪನ್ನ ಸಂಗ್ರಹಣೆ ಹಕ್ಕು, ಪ್ರವಾಸೋದ್ಯಮ ಮತ್ತು ಅದರಿಂದ ಬರುವ ಪಾಲು, ಕಾಳಿ ನದಿಯನ್ನು ಜನರಿಗಾಗಿ ಬಳಕೆ, ಕುಡಿಯಲು ನೀರು, ರೈತರ ಜಮೀನಿಗೆ ನೀರು, ಸಿಎಸ್ ಆರ್ ಅನುದಾನ ನಿರಾಶ್ರಿತರಿಗೆ ಅಭಿವೃದ್ಧಿ ಹಂಚಿಕೆ, ಜೊಯಿಡಾದಲ್ಲಿ ನ್ಯಾಯಾಲಯ, ಅರಣ್ಯ ಕಾಲೇಜು, ಬಸ್ ಡಿಪೋ, ಸಣ್ಣ ನೀರಾವರಿ ಇಲಾಖೆ, ಗುಡಿ ಕೈಗಾರಿಕೆ, ನೊಂದಣಿ ಕಚೇರಿ, ಸ್ಥಳೀಯ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ವಲಸೆ ಹೋಗುವುದು ನಿಲ್ಲಿಸಬೇಕು. ಸ್ಥಳೀಯ ಬುಡಕಟ್ಟು ಕುಣಬಿ ಜನಾಂಗದ ಸಂಸ್ಕೃತಿ, ದೇವರು, ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ, ಸ್ಥಳೀಯ ಭತ್ತ, ರಾಗಿ, ಸಾವಯವ ತಳಿಗಳ ಸಂರಕ್ಷಣೆ ಮತ್ತು ಪ್ರೋತ್ಸಾಹ ಭತ್ತ ಸಂಗ್ರಹಣೆ ಕೇಂದ್ರ ಅಗತ್ಯ ಇದೆ.ಇದು ರಾಜಕೀಯ ಇಚ್ಛಾಶಕ್ತಿ ಇದ್ದರೆ ಮಾತ್ರ ಸಾಧ್ಯ ಎಂದರು.
ಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ ಚುನಾವಣೆಗಳು ತಾಲೂಕಿನ ಭವಿಷ್ಯ ಬದಲಿಸಲಿದೆ. ರಾಜಕೀಯ ಅಧಿಕಾರದಿಂದ ಕುಣಬಿ ಗಳನ್ನು ವಂಚಿತರನ್ನಾಗಿ ಮಾಡಿದರೆ ಬರುವ ವಿಧಾನ ಸಭೆ, ಲೋಕಸಭೆ ಬಹಿಷ್ಕಾರ ಮಾಡುವ ಬಗ್ಗೆ ಸಮಾಜ ನಿರ್ಣಯ ಮಾಡಬೇಕಾಗುತ್ತದೆ. ಕೊನೆಯದಾಗಿ ಈ ಹಿಂದೆ ಬೇರೆ ಜನಾಂಗದವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಈಗ ಕುಣಬಿಗಳಿಗೆ ಸ್ವ ಖುಷಿಯಿಂದ ಅವಕಾಶ ಬಿಟ್ಟು ಕೊಡಬೇಕು. ಮೊಸ ಮಾಡಿದರೆ ಸಹಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಕುಣಬಿ ಸಮಾಜದ ಮುಖಂಡರಾದ ಮಾಬಳು ಕುಂಡಲಕರ , ದಯಾನಂದ ಕುಮಗಾಳಕ, ಸುಭಾಷ್ ಗಾವಡಾ, ಪ್ರಸನ್ನ ಗಾವಡಾ, ಸುಭಾಷ್ ವೇಳಿಪ, ಅಜಿತ್ ಮಿರಾಶಿ, ಬುದೊ ಕಾಲೇಕರ, ಕೃಷ್ಣ ಮಿರಾಶಿ, ಬಾಲಚಂದ್ರ ಮಿರಾಶಿ, ಮಾಳು ಸೋಲೆಕರ, ರಾಜೇಂದ್ರ ಪಿಸೋಸಕರ, ಪ್ರಭಾಕರ ವೇಳಿಪ, ನಾರಾಯಣ ವೇಳಿಪ, ವಿಷ್ಣು ಬಿರಂಗತ್, ರಾಜೇಶ್ ಗಾವಡಾ, ಸಂಜು ಸೋಲೇಕರ, ಗಜಾನನ ಮಿರಾಶಿ, ದಿವಾಕರ ಕುಂಡಲಕರ ಮುಂತಾದವರು ಇದ್ದರು.
