ಸುದ್ದಿ ಕನ್ನಡ ವಾರ್ತೆ
ಭಟ್ಕಳ:ತಾಲೂಕಿನ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಹಳಿಯ ಮೇಲೆ ಬಿದ್ದ ಘಟನೆ ನಡೆದಿದ್ದು, ಸಹ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರವಾರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಭಟ್ಕಳ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲು ನಿಲ್ಲುವ ಮೊದಲೇ ಮಹಿಳೆ ಬಾಗಿಲಿನ ಸಮೀಪ ಬಂದಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯನ್ನು ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ರೈಲಿನ ತುರ್ತು ಚೈನ್ ಎಳೆದಿದ್ದಾರೆ. ಪರಿಣಾಮ ರೈಲು ತಕ್ಷಣ ನಿಂತಿದ್ದು, ಮಹಿಳೆಗೆ ಯಾವುದೇ ಗಂಭೀರ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಬಳಿಕ ರೈಲನ್ನು ಸ್ವಲ್ಪ ಹಿಂದಕ್ಕೆ ಚಲಿಸಿ ಹಳಿಯ ಕೆಳಗಿದ್ದ ಮಹಿಳೆಯನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಗಿದೆ. ಮಹಿಳೆಯ ಹೆಸರು ಹಾಗೂ ವಿಳಾಸ ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ವೇಳೆ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
