ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಹಿತರಕ್ಷಣೆಗೆ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಸಿಎಂಗೆ ಎಂಟು ಪ್ರಮುಖ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮೂಲಕ ನೀಡಲಾಯಿತು. ಜೋಯಿಡಾ: 13 ಗುರುವಾರ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಸಂಖ್ಯೆ 4106 (E) ವಿರುದ್ಧ ಜೋಯಿಡಾ ತಾಲೂಕಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಈ ಅಧಿಸೂಚನೆಯಿಂದ ಸಾರ್ವಜನಿಕರಿಗೆ ಆಗಲಿರುವ ತೊಂದರೆಗಳನ್ನು ತಪ್ಪಿಸಲು ಮತ್ತು ಸ್ಥಳೀಯರ ಹಿತರಕ್ಷಣೆಗಾಗಿ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಜೋಯಿಡಾ ತಹಶೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಎಂಟು ಪ್ರಮುಖ ಆಕ್ಷೇಪಣೆ ಹಾಗೂ ಸಲಹೆಗಳನ್ನೊಳಗೊಂಡ ಮಹತ್ವದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ ಅವರು, “ಜೋಯಿಡಾ ತಾಲೂಕು ಈಗಾಗಲೇ ಕಾಳಿ ಜಲವಿದ್ಯುತ್ ಯೋಜನೆ, ದಾಂಡೇಲಿ ಅಭಯಾರಣ್ಯ, ಅಣಶಿ ರಾಷ್ಟ್ರೀಯ ಉದ್ಯಾನವನ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದಂತಹ ಯೋಜನೆಗಳಿಂದಾಗಿ ಸಾಕಷ್ಟು ನೊಂದಿದೆ. ಇಲ್ಲಿನ ಸ್ಥಳೀಯ ಜನರು ರಸ್ತೆ, ವಿದ್ಯುತ್, ಆಸ್ಪತ್ರೆಯಂತಹ ಕನಿಷ್ಠ ಮೂಲಭೂತ ಸೌಕರ್ಯಗಳಿಗಾಗಿಯೇ ದಿನನಿತ್ಯ ಹೋರಾಟ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಸ್ತೂರಿರಂಗನ್ ವರದಿ ಆಧರಿಸಿ ತಾಲೂಕಿನ ಬರೋಬ್ಬರಿ 88 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿರುವುದು ಜನಸಾಮಾನ್ಯರ ಬದುಕನ್ನು ಸಂಪೂರ್ಣವಾಗಿ ದುಸ್ತರಗೊಳಿಸಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.ಮನವಿಯಲ್ಲಿರುವ ಪ್ರಮುಖ 8 ಆಕ್ಷೇಪಣೆಗಳು ಮತ್ತು ಸಲಹೆಗಳು:ಕೇರಳ ಮಾದರಿ ಸಮೀಕ್ಷೆ: ಕೇರಳ ರಾಜ್ಯದ ಮಾದರಿಯಲ್ಲಿಯೇ ನಮ್ಮ ಕರ್ನಾಟಕ ರಾಜ್ಯದಲ್ಲೂ ಪಶ್ಚಿಮ ಘಟ್ಟಗಳ ಭೌಗೋಳಿಕ ಪರಿಸರದ ಭೌತಿಕ ಸಮೀಕ್ಷೆಯನ್ನು ನಡೆಸಬೇಕು.

ಕಂದಾಯ ಗ್ರಾಮಗಳಲ್ಲಿನ ಪ್ರದೇಶಗಳ ಪರಿಷ್ಕೃತ ವಿವರಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು.ಪ್ರತ್ಯೇಕ ಅಧ್ಯಯನ: ಕರಡು ಅಧಿಸೂಚನೆಯ ಹಿನ್ನೆಲೆಯಲ್ಲಿ ಜೋಯಿಡಾ ಸೇರಿದಂತೆ ಇಡೀ ಉತ್ತರಕನ್ನಡ ಜಿಲ್ಲೆಯ ಮೇಲೆ ಬೀರಲಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಣಾಮಗಳ ಕುರಿತು ಸರ್ಕಾರ ಪ್ರತ್ಯೇಕವಾಗಿ ಸಮಗ್ರ ಅಧ್ಯಯನ ನಡೆಸಬೇಕು.ವಾಸದ ಮನೆ ಹಾಗೂ ಕೃಷಿಗೆ ವಿನಾಯಿತಿ: ಕರಡು ಅಧಿಸೂಚನೆಯ ನಿಯಮಗಳ ಅಡಿಯಲ್ಲಿ ಗಣಿಗಾರಿಕೆಗೆ ಇರುವ ನಿಬಂಧನೆಗಳ ನೆಪದಲ್ಲಿ, ಸ್ಥಳೀಯ ನಿವಾಸಿಗಳು ವಾಸಿಸುವ ಮನೆ, ಕೊಟ್ಟಿಗೆ ಹಾಗೂ ಕೃಷಿ ಪೂರಕ ನಿರ್ಮಾಣ ಚಟುವಟಿಕೆಗಳಂತಹ ಸದ್ಭಾವನೆಯ ಬಳಕೆಗೆ ಯಾವುದೇ ಕಾರಣಕ್ಕೂ ನಿಬಂಧನೆಗಳನ್ನು ವಿಧಿಸಬಾರದು.ಹೊಸ ಜಲವಿದ್ಯುತ್ ಯೋಜನೆಗಳಿಗೆ ನಿಷೇಧ: ನೂತನ ಜಲವಿದ್ಯುತ್ ಯೋಜನೆಗಳನ್ನು ಕೇವಲ ನಿಯಂತ್ರಿತ ಚಟುವಟಿಕೆಗಳ ಪಟ್ಟಿಗೆ ಸೇರಿಸುವ ಬದಲು, ಗಣಿಗಾರಿಕೆಯಂತೆಯೇ ಸಂಪೂರ್ಣವಾಗಿ ನಿಷೇಧಿಸಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಜಲವಿದ್ಯುತ್ ಯೋಜನೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸ್ಥಳೀಯ ನಿವಾಸಿಗಳಿಗೆ ಆದ್ಯತೆಯ ಮೇರೆಗೆ ವಿತರಿಸಬೇಕು. ಇದಕ್ಕಾಗಿ ಅರಣ್ಯ ಪ್ರದೇಶಗಳಲ್ಲಿ ಓವರ್‌ಹೆಡ್ ತಂತಿಗಳ ಬದಲಾಗಿ ಕಡ್ಡಾಯವಾಗಿ ‘ಇನ್ಸುಲೇಟೆಡ್ ಕೇಬಲ್’ ಬಳಸಬೇಕು. ಕಾಳಿ ಜಲವಿದ್ಯುತ್ ಯೋಜನೆಯಿಂದ ಸ್ಥಳೀಯರು ಕಷ್ಟ ಅನುಭವಿಸುತ್ತಿದ್ದು, ಲಾಭವನ್ನು ಮಾತ್ರ ಇತರರು ಪಡೆಯುತ್ತಿರುವುದನ್ನು ನೋಡಿದ ಮೇಲೆ, ಇಂತಹ ಮಾರಕ ಯೋಜನೆಗಳಿಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಲು ಸಾಧ್ಯವಿಲ್ಲ.ನೈಸರ್ಗಿಕ ಸಂಪನ್ಮೂಲ ಸಾಗಣೆ ನಿಷೇಧ: ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಿದ ಪ್ರದೇಶದಿಂದ ನೈಸರ್ಗಿಕ ಸಂಪನ್ಮೂಲಗಳನ್ನು, ವಿಶೇಷವಾಗಿ ನೀರನ್ನು ನದಿ ತಿರುವು ಯೋಜನೆ ಅಥವಾ ಪೈಪ್‌ಲೈನ್ ಮುಖಾಂತರ ಇತರ ಪ್ರದೇಶಗಳಿಗೆ ಒಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು.ಜೀವನೋಪಾಯಕ್ಕೆ ಕಾನೂನುಬದ್ಧ ರಕ್ಷಣೆ: ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ಇರುವ ಮನೆಗಳು, ಕೃಷಿ ಜಮೀನುಗಳು ಮತ್ತು ಕಾನೂನುಬದ್ಧವಾಗಿ ನಡೆಯುತ್ತಿರುವ ಜೀವನೋಪಾಯದ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಸ್ಪಷ್ಟವಾದ ಕಾನೂನು ರಕ್ಷಣೆ ನೀಡಬೇಕು.ಮೂಲಸೌಕರ್ಯ ಕಾಮಗಾರಿಗಳಿಗೆ ವಿನಾಯಿತಿ: ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಶಾಲೆ ಹಾಗೂ ಆರೋಗ್ಯ ಕೇಂದ್ರಗಳು ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯ ಕಾಮಗಾರಿಗಳಿಗೆ ವಿಶೇಷ ವಿನಾಯಿತಿ ನೀಡಬೇಕು ಹಾಗೂ ತಕ್ಷಣದ ಅನುಮತಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು.ಪರಿಸರ ಸ್ನೇಹಿ ಪ್ರವಾಸೋದ್ಯಮ: ಜೋಯಿಡಾದ ಪರಿಸರ ಆಧಾರಿತ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಸ್ಥಳೀಯ ಜನರಿಗೆ ಪೂರಕವಾದ ‘ಪರಿಸರ ಸ್ನೇಹಿ’ (Eco-friendly) ಮಾದರಿಯಲ್ಲಿಯೇ ಮುಂದುವರಿಸಲು ಅವಕಾಶ ನೀಡಬೇಕು.ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆ ತರಬಾರದು. ರಾಜ್ಯ ಸರ್ಕಾರ ಈ ಎಂಟೂ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ಸರ್ಕಾರದ ಮುಂದೆ ಬಲವಾದ ಆಕ್ಷೇಪಣೆ ಸಲ್ಲಿಸುವ ಮೂಲಕ 88 ಗ್ರಾಮಗಳ ಜನವಸತಿ ಪ್ರದೇಶಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಲು ಒತ್ತಡ ತರಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಜೋಯಿಡಾ ತಾಲೂಕಿನ ಸಾರ್ವಜನಿಕರು ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.ಇದಕ್ಕೂ ಮೊದಲು ಜೋಯಿಡಾ ದ ಶಿವಾಜಿ ವೃತ್ತದಿಂದ ಭಾರಿ ಮೆರವಣಿಗೆ ಮೂಲಕ ಜನತೆ ತಹಸೀಲ್ದಾರ ಕಚೇರಿಗೆ ಬಂದರು ಈ ಸಂದರ್ಭದಲ್ಲಿ, ಪ್ರಮುಖ ರಾದ ಶಿವಾಜಿ ಗೋಸಾವಿ, ತುಕಾರಾಂ ಮಾಂಜರೇಕಾರ್, ಆರ್ ವಿ ದಾನಗೇರಿ, ಸಂತೋಷ ರೆಡ್ಕರ್,ಸಿದ್ದು ಜೋಕೆರಿ, ಅರುಣ್ ಕಾಮರೆಕಾರ್, ಶ್ರೀಪಾದ್ ದೇಸಾಯಿ, ಶ್ರೀನಾಥ್ ದೇಸಾಯಿ, ಶ್ರೀಧರ್ ಭಾಗ್ವತ್,ಗಿರೀಶ ಗೋಸಾವಿ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.