ಸುದ್ದಿ ಕನ್ನಡ ವಾರ್ತೆ

ಕಿತ್ತೂರು: ಹಲವು ಜಿಲ್ಲೆಗಳಲ್ಲಿ ಸರಣಿ ಮೋಟಾರ್‌ಸೈಕಲ್‌ಗಳನ್ನು ಕಳ್ಳತನ ಮಾಡಿ ಪೊಲೀಸರಿಗೆ ಸವಾಲಾಗಿದ್ದ ಆರೋಪಿಯನ್ನು ಕಿತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನಿಂದ ಬರೋಬ್ಬರಿ ₹30 ಲಕ್ಷ ಮೌಲ್ಯದ 43 ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಗಳಿಗೆ ಮಹತ್ವದ ತಿರುವು ದೊರೆತಿದೆ.

ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ನಿವಾಸಿ ನಾರಾಯಣ ಮನೋಹರ ಕದಮ್ (32) ಬಂಧಿತ ಆರೋಪಿತ. ಕಳೆದ ಎರಡು ವರ್ಷಗಳಿಂದ ಕಿತ್ತೂರು ಸೇರಿದಂತೆ ಬೆಳಗಾವಿ, ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಪಿಎಂಸಿ ಗೇಟ್‌ನಿಂದ ಆರಂಭವಾದ ತನಿಖೆ
ಜ.12, 2026ರಂದು ಕಿತ್ತೂರು ಎಪಿಎಂಸಿ ಗೇಟ್ ಬಳಿ ನಿಲ್ಲಿಸಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವಾದ ಪ್ರಕರಣ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 14/2026ರಂತೆ BNS-2023ರ ಕಲಂ 303(2) ಅಡಿಯಲ್ಲಿ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯ ಚಲನವಲನದ ಮೇಲೆ ನಿಗಾ ಇರಿಸಿದ್ದರು.
ತನಿಖೆಯ ವೇಳೆ ಆ.4ರಂದು ಎಂ.ಕೆ. ಹುಬ್ಬಳ್ಳಿ ಪಟ್ಟಣದ ಪಾರಿಶ್ವಾಡ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ನಾರಾಯಣ ಕದಮ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತೀವ್ರ ವಿಚಾರಣೆಯಲ್ಲಿ ಆತ ಹಲವು ಜಿಲ್ಲೆಗಳಲ್ಲಿ ಸರಣಿ ಬೈಕ್ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಆರೋಪಿತನ ಸ್ವಇಚ್ಛಾ ಹೇಳಿಕೆಯ ಆಧಾರದ ಮೇಲೆ ಪಂಚರ ಸಮಕ್ಷಮ ವಿವಿಧೆಡೆಗಳಿಂದ ಒಟ್ಟು 43 ಮೋಟಾರ್‌ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿತನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಹಾಗೂ ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆ.7ರಂದು ಕಿತ್ತೂರು ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಯಾವ ಜಿಲ್ಲೆಯಿಂದ ಎಷ್ಟು ಬೈಕ್‌ಗಳು?
ಬೆಳಗಾವಿ ಜಿಲ್ಲೆ: 25 ಮೋಟಾರ್‌ಸೈಕಲ್‌ಗಳು
ಬೆಳಗಾವಿ ಕಮಿಷನರೇಟ್: 8 ಮೋಟಾರ್‌ಸೈಕಲ್‌ಗಳು
ಧಾರವಾಡ ಜಿಲ್ಲೆ: 6 ಮೋಟಾರ್‌ಸೈಕಲ್‌ಗಳು
ಹುಬ್ಬಳ್ಳಿ–ಧಾರವಾಡ ಕಮಿಷನರೇಟ್: 1 ಮೋಟಾರ್‌ಸೈಕಲ್
ಗದಗ ಜಿಲ್ಲೆ: 2 ಮೋಟಾರ್‌ಸೈಕಲ್‌ಗಳು
ಉತ್ತರ ಕನ್ನಡ ಜಿಲ್ಲೆ: 2 ಮೋಟಾರ್‌ಸೈಕಲ್‌ಗಳು
ಒಟ್ಟು: 43 ಮೋಟಾರ್‌ಸೈಕಲ್‌ಗಳು
ಆರೋಪಿತನ ವಿಚಾರಣೆಯಿಂದ ಕಿತ್ತೂರು, ಹಿರೇಬಾಗೇವಾಡಿ, ಸಂಕೇಶ್ವರ, ಕಲಘಟಗಿ, ಯಲ್ಲಾಪುರ, ಸವದತ್ತಿ, ಗರಗ, ಕುಂದಗೋಳ, ಹಳಿಯಾಳ, ಕಾಕತಿ, ಅಂಕಲಗಿ, ಲಕ್ಷ್ಮೇಶ್ವರ, ಧಾರವಾಡ ಗ್ರಾಮೀಣ ಹಾಗೂ ಹುಬ್ಬಳ್ಳಿ ಉಪನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಗಳ ಕುರಿತು ಮಹತ್ವದ ಮಾಹಿತಿ ಪೊಲೀಸರಿಗೆ ಲಭಿಸಿದೆ.
ತನಿಖಾ ತಂಡಕ್ಕೆ ಎಸ್ಪಿ ಶ್ಲಾಘನೆ
ಈ ಯಶಸ್ವಿ ಕಾರ್ಯಾಚರಣೆಯನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಐ. ಐಸರಗಿ, ಡಾ. ವೀರಯ್ಯ ಹಿರೇಮಠ, ಬೈಲಹೊಂಗಲ ಉಪವಿಭಾಗದ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಿತ್ತೂರು ಸಿಪಿಐ ಶಿವಾನಂದ ಜಿ. ಗುಡಗನಟ್ಟಿ, ಪಿಎಸ್‌ಐ ಭರತ್ ಎಸ್. (ಕಾ&ಸು), ಪಿಎಸ್‌ಐ ಚಿ.ಚಿ. ಹಂಪಣ್ಣವರ (ಸಿಐ) ಹಾಗೂ ಕಿತ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಕೈಗೊಂಡಿದ್ದರು.

ಕಾರ್ಯಾಚರಣೆಯಲ್ಲಿ ಶರೀಪ್ ದಫೇದಾರ, ಅದೃಶ್ಯಪ್ಪ ಚಿಕ್ಕೇರಿ, ನಾಗರಾಜ ಕಡಗನ್ನವರ, ಸುನೀಲ ಮುರಗೋಡ, ಬಾಹುಬಲಿ ಅಗಸಿಮನಿ, ಹನಮಂತ ಜೀವಾಸೂರ, ತನಿಖಾ ಸಹಾಯಕರಾದ ಎಂ.ಬಿ. ಕಂಬಾರ, ಎಂ.ಎಸ್. ಹಳ್ಳ, ಎಂ.ಆರ್. ಲಮಾಣಿ ಹಾಗೂ ಬೆಳಗಾವಿ ಟೆಕ್ನಿಕಲ್ ಸೆಲ್‌ನ ಸಚಿನ್ ಪಾಟೀಲ ಅವರು ಭಾಗವಹಿಸಿದ್ದರು.