ಸುದ್ದಿ ಕನ್ನಡ ವಾರ್ತೆ
ಶಿರಸಿ: ನಗರದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿ ಹೊಂಡ ಮುಚ್ಚುತ್ಚಿರುವ ದೃಶ್ಯವನ್ನು ನೋಡಿದರೆ ಹಾಗೂ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡುವುದನ್ನು ನೋಡಿದರೆ ನಮಗೆ ಅನಿಸುವುದು ಕೇವಲ ರಸ್ತೆ ಕಿತ್ತು ಹೋಗಿದ್ದಲ್ಲ, ಬದಲಾಗಿ ಇದೊಂದು “ಕಿತ್ತೂಗಿರುವ ರಾಜ್ಯ ಸರ್ಕಾರ”
ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು
ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳನ್ನು
ಮುಚ್ಚುವ ಕಾರ್ಯಸಹ ಆಗದಿರುವುದು ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ರಾಜ್ಯ ಸರ್ಕಾರದ ಅಸಹಾಯಕತೆಯನ್ನು ಎತ್ತಿ ತೋರುತ್ತಿದೆ.
ಶಿರಸಿ ಸಿದ್ದಾಪುರ ಕ್ಷೇತ್ರದ ಯಾವುದೇ ರಸ್ತೆ ನೋಡಿದರೂ ಹೊಂಡಗಳಿಂದ ತುಂಬಿದೆ. ಶಿರಸಿ ಸಿದ್ದಾಪುರ ಮುಖ್ಯ ರಸ್ತೆಯಲ್ಲಿನ ಅಜ್ಜಿಬಳ ಸಮೀಪ ಹೊಂಡದಿಂದ ಇತ್ತೀಚೆಗೆ ಯುವಕನೋರ್ವ ಮೃತಪಟ್ಟಿದ್ದಾನೆ. ಇನ್ನೆಷ್ಟು ಸಾವು ನೋವು ಗಳು ಸಂಭವಿಸಿದ ನಂತರ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳಿಗೆ ರಸ್ತೆಯಲ್ಲಿನ ಹೊಂಡ ಮುಚ್ಚುವ ಕಾರ್ಯ ನೆನಪಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಶಿರಸಿಯ ಐದು ರಸ್ತೆ ವೃತ್ತದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದೆ. ಅದನ್ನು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರು ಸೇರಿ ತುಂಬಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳನ್ನು ಸಾರ್ವಜನಿಕರಿಗೆ ದುರೂಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ನಿದ್ದೆಮಾಡುತ್ತಿದೆಯೇ? ಅಥವಾ ಜಾಣ ಮೌನ ತಾಳಿದೆಯೇ ಎಂದು ತಿಳಿಯುತ್ತಿಲ್ಲ. ಕನಿಷ್ಠ ಪಕ್ಷ ರಸ್ತೆಯಲ್ಲಿನ ಹೊಂಡವನ್ನು ಮುಚ್ಚುವ ಮೂಲಕ ವಾಹನ ಸವಾರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಸ್ ಗಳ ಕಥೆಯಂತೂ ಚಿಂತಾಜನಕವಾಗಿದೆ.
ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಗದರಿಸುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವ ಸೌಜನ್ಯ ಸಹ ಇಲ್ಲದಂತಾಗಿದೆ. ಜನಪರ ಸರ್ಕಾರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಸಮಸ್ಯೆ ಕಾಣಿಸುದಿಲ್ಲವೇ ?
ರೂಟ್ ಗಳಿಗೆ ಹೊರಟ ಬಸ್ ಗಳು ಸರಿಯಾದ ಸಮಯಕ್ಕೆ ಹೋಗಿ ಬರುತ್ತದೆ ಎಂಬ ನಂಬಿಕೆಯೇ ಜನರಲ್ಲಿ ಹೊರಟು ಹೋಗಿದೆ. ಸಾರಿಗೆ ಬಸ್ ಗಳನ್ನೇ ನಂಬಿಕೊಂಡು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಸರಿಯಾದ ಸಮಯಕ್ಕೆ ಬಸ್ ಬಾರದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆಲ್ಲಾ ಯಾರು ಜವಾಬ್ದಾರರು. ವ್ಯವಸ್ಥೆಗಳೆಲ್ಲವೂ ಅವ್ಯವಸ್ಥೆಯ ಆಗರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ಸರಿಪಡಿಸಬೇಕು.ಇಲ್ಲವಾದಲ್ಲಿ ಇಂತಹ ಅವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಅನಂತಮೂರ್ತಿ ಹೆಗಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
