ಸುದ್ಧಿಕನ್ನಡ ವಾರ್ತೆ
ಸ್ವಾತಂತ್ರ್ಯ ದಿನಾಚರಣೆಯಂದು ಬೆಟ್ಟದ ತುತ್ತ ತುದಿಯಲ್ಲಿ ರಾಷ್ಟ್ರಧ್ವಜ ಹಾರಿಸುವ ಉದ್ದೇಶದಿಂದ ಗೋವಾದ ಕಾಣಕೋಣದ ಗಾವಡೋಂಗ್ರಿ ಬಾಡಸರೆ ದೇವಸ್ಥಾನದ ದಟ್ಟ ಕಾಡಿನಲ್ಲಿ ಬುಧವಾರ ಚಾರಣಕ್ಕೆ ತೆರಳಿದ್ದ ರೋಹಿತ್ ಕುಡಾಲ್ಕರ್ ಎಂಬ ಚಾರಣಿಗನೊಬ್ಬ ಏಕಾಂಗಿಯಾಗಿ ಸಿಲುಕಿಕೊಂಡ ಘಟನೆ ನಡೆದಿದೆ.
ಬುಧವಾರ ಮಧ್ಯಾನ್ಹ ಈ ದಟ್ಟ ಕಾಡಿನಲ್ಲಿ ಈತ ಚಾರಣಕ್ಕೆ ಏಕಾಂಗಿಯಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಬುಧವಾರ ಮಧ್ಯಾನ್ಹ 12 ಗಂಟೆಯ ಸುಮಾರು ಭೂಕುಸಿತ ಸಂಭವಿಸಿದ್ದರಿಂದ ರೋಹಿತ್ ದಟ್ಟ ಕಾಡಿನ ಮಧ್ಯೆ ಸಿಲುಕಿಕೊಂಡಿದ್ದಾನೆ. ಕಾಣಕೋಣ ಪೋಲಿಸರಿಗೆ ಮಡಗಾಂವ ನಿಯಂತ್ರಣ ಕೊಠಡಿಯಿಂದ ಈ ಕುರಿತು ಮಾಹಿತಿ ಲಭ್ಯವಾಗಿದೆ. ತಕ್ಷಣ ಸಹಾಯದ ಅಗತ್ಯವಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಈ ಮಾಹಿತಿ ಪಡೆದ ಸ್ಥಳೀಯ ಪೋಲಿಸರು , ಅರಣ್ಯ ಇಲಾಖೆ , ಅಗ್ನಿಶಾಮಕ ದಳದ ಸಿಬ್ಬಂಧಿಗಳು ತಕ್ಷಣ ಚಾರಣಿಗನ ರಕ್ಷಣೆಗೆ ಮುಂದಾದರು.
ಸ್ವಾಂತಂತ್ರ್ಯ ದಿನಾಚರಣೆಯಂದು ಈ ದಟ್ಟ ಕಾನನದ ಬೆಟ್ಟದ ತುತ್ತ ತುದಿಯಲ್ಲಿ ರಾಷ್ಟ್ರಧ್ವಜ ಹಾರಿಸುವ ಉದ್ದೇಶದಿಂದ ರೋಹಿತ್ ಈತ ಏಕಾಂಗಿಯಾಗಿ ಈ ಬೆಟ್ಟದಲ್ಲಿ ಚಾರಣಕ್ಕೆ ಹೊರಟಿದ್ದ. ಅಗಷ್ಟ 15 ರಂದು ಈ ಬೆಟ್ಟದ ತುತ್ತ ತುದಿಯೇರಿ ತ್ರಿವರ್ಣ ಧ್ವಜ ಹಾರಿಸುವುದು ಈತನ ಮುಖ್ಯ ಉದ್ದೇಶವಾಗಿತ್ತು. ಈತ ಬೆಟ್ಟ ಏರುತ್ತಿರುವಾಗಲೇ ಇದೇ ಮಾರ್ಗದಲ್ಲಿ ದಿಢೀರ್ ಭೂಕುಸಿತವುಂಟಾಗಿ ಮುಂದಿನ ದಾರಿ ಬಂದ್ ಆಗಿದೆ. ಯುವಕ ದಟ್ಟ ಕಾಡಿನ ಮಧ್ಯದಲ್ಲಿ ಏಕಾಂಗಿಯಾಗಿ ಸಿಲುಕಿಕೊಂಡರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರೋಹಿತ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಅರಿತುಕೊಂಡು ಮುನ್ನೆಚ್ಚರಿಕೆಯಿಂದ ಮೊಬೈಲ್ ಪೋನ್ ನಲ್ಲಿ ತುರ್ತು ವಿಭಾಗಕ್ಕೆ ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಣಕೋಣ ಪೋಲಿಸರು ಮತ್ತು ಅರಣ್ಯ ಇಲಾಖೆ ಸಿಬ್ಬಂಧಿಗಳು , ಅಗ್ನಿಶಾಮಕ ದಳದ ಸಿಬ್ಬಂಧಿಗಳು, ರಕ್ಷಣಾ ತಂಡ ಜಂಟಿಯಾಗಿ ಶೋಧ ರಕ್ಷಣಾ ಕಾರ್ಯ ಕೈಗೊಂಡಿದೆ. ದಟ್ಟ ಅರಣ್ಯದಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಅರಣ್ಯದಲ್ಲಿ ಸಿಲುಕಿದ್ದ ರೋಹಿತ್ ರನ್ನು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಗಿದೆ. ತನ್ನ ಜೀವ ಉಳಿಸಿದ್ದಕ್ಕಾಗಿ ರೋಹಿತ್ ರವರು ರಕ್ಷಣಾ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
