ಸುದ್ದಿ ಕನ್ನಡ ವಾರ್ತೆ
ಪಣಜಿ; ಗೋವಾದ ವರ್ಣದಲ್ಲಿರುವ ಶಿಲ್ಪಲೋಕವು ಹಲವಾರು ಹೊಸ ಪ್ರಯೋಗಗಳ ಮೂಲಕ ಪ್ರಾಚೀನ ಭಾರತೀಯ ಶಿಲ್ಪಕಲೆಯ ಶ್ರೀಮಂತ ಸಂಪ್ರದಾಯವನ್ನು ಪುನರಜ್ಜೀವನಗೊಳಿಸಿದೆ. ಶಿಲ್ಪಲೋಕದ ಸಂಸ್ಥಾಪಕರಾದ ಶ್ರೀ ಪುಟ್ಟಸ್ವಾಮಿ ಗುಡಿಗಾರ್ ರವರ 75ನೇ ಜನ್ಮದಿನಾಚರಣೆಯ ಸಮಾರಂಭವು ಪಣಜಿ ಸಮೀಪದ ತಾಲಿಗಾವ್ ಸಮುದಾಯ ಭವನದಲ್ಲಿ ಅಕ್ಟೋಬರ್ 6 ಸಂಜೆ 5 ರಿಂದ ರಾತ್ರಿ 9:30ವರೆಗೆ ನಡೆಯಲಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಗೋವಾ ಮುಖ್ಯಮಂತ್ರಿ, ಡಾ. ಪ್ರಮೋದ್ ಸಾವಂತ್, ಕೇಂದ್ರ ಸಚಿವ ಶ್ರೀಪಾದ ನಾಯಕ್, ರಾಜ್ಯ ಲೋಕೋಪಯೋಗಿ ಸಚಿವ ದಿಗಂಬರ್ ಕಾಮತ್, ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಾಬುಶ್ ಮಾನಸೇರಾಟ್ , ರಾಷ್ಟ್ರೀಯ ಸಮುದ್ರ ಶಾಸ್ತ್ರ ಸಂಸ್ಥೆ ನಿರ್ದೇಶಕ ಪ್ರೊಫೆಸರ್ ಸುನಿಲ್ ಕುಮಾರ್ ಸಿಂಗ್, ವೇದಿಕೆ ಮೇಲೆ ಉಪಸ್ಥಿತರಿರುವರು.
ಸಮಾರಂಭದಲ್ಲಿ ಹಲವು ಜನ ಸಾಧಕರಿಗೆ ಶಿಲ್ಪಲೋಕ ಸಾಂಸ್ಕೃತಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸುವಂತೆ ಕೋರಲಾಗಿದೆ.
