ಸುದ್ದಿ ಕನ್ನಡ ವಾರ್ತೆ
ಶಿರಸಿ: ಭಾರತೀಯ ಚಿತ್ರರಂಗದ ಮೇರು ನಟ, ಬಹುಮುಖಿ ಪ್ರತಿಭೆಯ ಹಿರಿಯ ಕಲಾವಿದ ಅನಂತ್ ನಾಗ್ ಅವರಿಗೆ ಚಲನಚಿತ್ರ ರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಲಭಿಸಿರುವುದು ಉತ್ತರ ಕನ್ನಡ ಜಿಲ್ಲೆಗೆ ಹಾಗೂ ಸಮಸ್ತ ಕರ್ನಾಟಕಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಹಲವು ದಶಕಗಳಿಂದ ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ನೂರಾರು ಮರೆಯಲಾಗದ ಪಾತ್ರಗಳಿಗೆ ಜೀವ ತುಂಬಿ, ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಅಪ್ರತಿಮ ಸಾಧಕರು ಅನಂತ್ ನಾಗ್. ಅವರ ನೈಜ ಅಭಿನಯ, ಕಲಾ ನಿಷ್ಠೆ ಹಾಗೂ ಸರಳ ವ್ಯಕ್ತಿತ್ವ ಇಂದಿನ ತಲೆಮಾರಿಗೆ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಬಣ್ಣಿಸಿದ್ದಾರೆ.
ಇಂದು ರಾಷ್ಟ್ರಮಟ್ಟದ ಈ ಪರಮೋಚ್ಚ ಪುರಸ್ಕಾರಕ್ಕೆ ಪಾತ್ರರಾಗಿರುವುದು ನಮ್ಮ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದೆ. ಇದು ಕೇವಲ ಒಬ್ಬ ಕಲಾವಿದನಿಗೆ ಸಂದ ಗೌರವವಲ್ಲ, ಬದಲಿಗೆ ನಮ್ಮ ಜಿಲ್ಲೆಗೆ ಹಾಗೂ ಇಡೀ ಕನ್ನಡ ನಾಡಿನ ಕಲಾ ಪರಂಪರೆಗೆ ಸಂದ ಶ್ರೇಷ್ಠ ಗೌರವವಾಗಿದೆ ಎಂದು ಬಣ್ಣಿಸಿದ್ದಾರೆ.
ನಮ್ಮ ಜಿಲ್ಲೆಯ ಹೆಮ್ಮೆಯ ಮಗನಾಗಿ, ತಮ್ಮ ಅದ್ಭುತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಬೆಳೆದು ಮೂಲತಃ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ ಅನಂತ್ ನಾಗ್ ಅವರಿಗೆ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವ ಸಂಸದರು, ಭಗವಂತನು ಅವರಿಗೆ ಉತ್ತಮ ಆರೋಗ್ಯವನ್ನು ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
