ಸುದ್ಧಿಕನ್ನಡ ವಾರ್ತೆ
ಪಣಜಿ: ಗಣೇಶ ಹಬ್ಬದ ಪ್ರಯುಕ್ತ ಪ್ರತಿ ಮನೆಯಲ್ಲೂ ಗಣೇಶನ ಪೂಜೆ ನಡೆಯುತ್ತಿದ್ದರೆ ಮತ್ತೊಂದೆಡೆ ಗೋವಾದ ತಂಬೋಶೆ-ಮೋಪಾ ಪ್ರದೇಶದಲ್ಲಿ ಓಂಕಾರ ಆನೆಯ ದಾಂದಲೆಯು ಈ ಭಾಗದ ರೈತರನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಸಪ್ಟೆಂಬರ್ 17 ರಂದು ಮತ್ತೆ ಓಂಕಾರ ಆನೆಯು ತಂಬೋಶೆ-ಮೋಪಾ ದಲ್ಲಿ ಜನವಸತಿ ಪ್ರದೇಶದಲ್ಲಿ ದಾಂದಲೆ ಆರಂಭಿಸಿದೆ. ಕೃಷಿಗೆ ಭಾರಿ ಹಾನಿಯುಂಟುಮಾಡಿದೆ. ಇದು ರೈತರಿಗೆ ಮನೆಯಲ್ಲಿ ಗಣೇಶನನ್ನು ಪೂಜಿಸುವಲ್ಲಿ ಮಗ್ನರಾಗುವ ಬದಲು ತಮ್ಮ ಕೃಷಿ ಕ್ಷೇತ್ರ ಕಾಯ್ದುಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.
ಕಳೆದ ವರ್ಷ ಕೂಡ ಓಂಕಾರ ಆನೆ ಜನವಸತಿಗೆ ಬಂದು ಭಾರಿ ಹಾನಿಯುಂಟುಮಾಡಿತ್ತು. ಇದೀಗ ಮತ್ತೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ಭಾಗದಲ್ಲಿ ಜನವಸತಿಗೆ ಬಂದು ದಾಂದಲೆ ಎಬ್ಬಿಸಿದೆ. ಪ್ರಸಕ್ತ ಬಾರಿ ಮೋಪಾ,ಕಳಶಿ, ತಂಬೋಶೆ, ತೊರ್ಸೆ ಪ್ರದೇಶದಲ್ಲಿ ಓಂಕಾರ ಆನೆಯ ದಾಂಧಲೆ ಹೆಚ್ಚಾಗಿದೆ. ಈ ಭಾಗದಲ್ಲಿ ಆನೆಯ ದಾಂಧಲೆಯಿಂದ ಕೃಷಿಕರಿಗೆ ಭಾರಿ ಹಾನಿಯುಂಟಾಗಿದ್ದು ಪೀಡಿತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಈ ಭಾಗದ ಜನರು ಸರ್ಕಾರವನ್ನು ಆಘ್ರಹಿಸಿದ್ದಾರೆ.
ಓಂಕಾರ ಆನೆಯು ಮೋಪಾ ಭಾಗಕ್ಕೆ ಪದೆ ಪದೆ ಬರುತ್ತಿರುವುದರಿಂದ ಕೃಷಿಕರು ಭಾರಿ ನಷ್ಠ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಓಂಕಾರ ಆನೆಯನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ,,,? ಈ ಭಾಗದಲ್ಲಿ ಜನವಸತಿಗೆ ಬಂದರೂ ಅರಣ್ಯ ಇಲಾಖೆಗೆ ಏಕೆ ಗೊತ್ತಾಗುತ್ತಿಲ್ಲ…?ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅಗತ್ಯ ಉಪಕರಣಗಳು ಮತ್ತು ಸಮರ್ಥ ಯಂತ್ರೋಪಕರಣಗಳ ಕೊರತೆಯಿಂದಾಗಿ ಅರಣ್ಯ ಇಲಾಖೆಯ ಪ್ರಯತ್ನಗಳು ಸೀಮಿತವಾಗುತ್ತಿದೆ. ಓಂಕಾರ ಆನೆಯು ಮುಂದು ಯಾವತ್ತೂ ಜನವಸತಿಗೆ ಬಾರದಂತೆ ಸರ್ಕಾರವು ಶಾಶ್ವತ ಕ್ರಮ ಕೃಗೊಳ್ಳಬೇಕು ಎಂಬ ಆಘ್ರಹವೂ ವ್ಯಕ್ತವಾಗುತ್ತಿದೆ.
