Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಅನಮೋಡ ಜಂಟಿ ತನಿಖಾ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು ಇಂದು ಮುಂಜಾನೆ ನಡೆಸಿದ ವಾಹನ ತಪಾಸಣೆ ವೇಳೆ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ ಮದ್ಯ ಹಾಗೂ ಸ್ಕೂಟರ್ ಅನ್ನು ಜಪ್ತಿ ಮಾಡಿ, ಹುಬ್ಬಳ್ಳಿ ಮೂಲದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Banner Ad

ಹುಬ್ಬಳ್ಳಿಯ ಗದಗ ರಸ್ತೆಯ ವಿನೋಬ ನಗರ ನಿವಾಸಿ ನವೀನ್ ಚೆನ್ನಯ್ಯ ದಾರ ಬಂಧಿತ ಆರೋಪಿ.

ನಡೆದದ್ದೇನು?: ಇಂದು (ಆಗಸ್ಟ್ 28, 2026) ಬೆಳಗಿನ ಜಾವ ಸುಮಾರು 1:30 ಗಂಟೆಗೆ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿ ಅನಮೋಡ ತನಿಖಾ ಠಾಣೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗೋವಾ ಕಡೆಯಿಂದ ಬಂದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು (ನೋಂದಣಿ ಸಂಖ್ಯೆ: KA-25/EV-4199) ತಡೆದು ತಪಾಸಣೆ ನಡೆಸಿದಾಗ, ವಾಹನದಲ್ಲಿದ್ದ ಎರಡು ದೊಡ್ಡ ಏರ್‌ಬ್ಯಾಗ್‌ಗಳಲ್ಲಿ ಗೋವಾ ರಾಜ್ಯದ ತಯಾರಿಕೆಯ ವಿವಿಧ ಬ್ರ್ಯಾಂಡ್‌ಗಳ ಒಟ್ಟು 28.25 ಲೀಟರ್ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆರೋಪಿಯು ಇದನ್ನು ಗೋವಾದಿಂದ ಹುಬ್ಬಳ್ಳಿಯ ತನ್ನ ಮನೆಗೆ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಎನ್ನಲಾಗಿದೆ.

ಅಬಕಾರಿ ಇಲಾಖೆಯು ಅಕ್ರಮ ಮದ್ಯ ಹಾಗೂ ಮದ್ಯ ಸಾಗಿಸಲು ಬಳಸಿದ ಅಂದಾಜು 60,000 ರೂ. ಮೌಲ್ಯದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದೆ. ಜಪ್ತಿ ಮಾಡಲಾದ ಮದ್ಯದ ಒಟ್ಟು ಮೌಲ್ಯ 16,500 ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ಯಲ್ಲಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಈ ಯಶಸ್ವಿ ದಾಳಿ ನಡೆದಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ್, ಅಬಕಾರಿ ಮುಖ್ಯ ಪೇದೆಗಳಾದ ಸಂತೋಷ್ ಸುಬ್ಬಣ್ಣವರ್, ಅಲ್ಲಿ ಸಾಬ್ ಅವರಾದಿ ಮತ್ತು ಅಬಕಾರಿ ಪೇದೆ ಗಜಾನನ್ ನಾಯ್ಕ ಪಾಲ್ಗೊಂಡಿದ್ದರು. ದಾಂಡೇಲಿ ವಲಯದ ಅಬಕಾರಿ ಉಪನಿರೀಕ್ಷಕ ಕರೆಪ್ಪ ಹೊಳೆನವರ್ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Banner Ad