Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ರೈತರು ಟಿಆರ್‌ಸಿ ಮೂಲಕ ಪಡೆದ ಕೃಷಿಯೇತರ ಮಾಧ್ಯಮಿಕ ಸಾಲದ ಕಂತನ್ನು ಒಂದು ವರ್ಷದ ಅವಧಿಗೆ ಮುಂದೂಡಲಾಗಿದೆ ಎಂದು ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಅಡಕೆ ಬೆಳೆಗೆ ಬಂದಿರುವ ಎಲೆಚುಕ್ಕಿ ರೋಗ ಹಾಗೂ ತೀವ್ರವಾದ ಇಳುವರಿ ಕುಸಿತದಿಂದ ಸಂಕಷ್ಟಕ್ಕೀಡಾದ ಕೃಷಿಕ ಸದಸ್ಯರಿಗೆ ನೆರವಾಗುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಮ್ಮ ಸಂಘವು ಪ್ರಾಮುಖ್ಯವಾಗಿ ಬೆಳೆಗಾರರಿಗೆ ಕೃಷಿ ಪತ್ತನ್ನು ಒದಗಿಸುವ ಸಹಕಾರಿ ಸಂಘವಾಗಿದೆ. ಅಡಿಕೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ನಮ್ಮ ಸಂಘದ ಸದಸ್ಯರು ತೀವ್ರವಾದ ನೈಸರ್ಗಿಕ ಕಾರಣಗಳಿಂದಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಜಿಲ್ಲೆಯ ಆಡಕೆ ಬೆಳೆಗಾರರು ಅದರಲ್ಲಿಯೂ ಸಿದ್ದಾಪುರ ಹಾಗೂ ಶಿರಸಿ ತಾಲೂಕಿನ ಅಡಕೆ ಕ್ಷೇತ್ರದ ಬಹುಭಾಗ ಮಾರಣಾಂತಿಕ ಎಲೆಚುಕ್ಕೆ ರೋಗಕ್ಕೆ ತುತ್ತಾಗಿದೆ. ಅಡಕೆ ಇಳುವರಿ ಪ್ರಸ್ತುತ ವರ್ಷ ಬಹುತೇಕ ಕಡೆಗಳಲ್ಲಿ ಎಕರೆಗೆ 1 ಕ್ವಿಂಟಲ್‌ನಿಂದ 5 ಕ್ವಿಂಟಲ್ ಮಾತ್ರ ಎಂದು ಅಂದಾಜಿಸಲಾಗಿದೆ. ತೋಟಗಾರಿಕಾ ಇಲಾಖೆಯ ವರದಿಯಿಂದಲೂ ಸಹ ಎಲೆಚುಕ್ಕೆ ರೋಗದ ತೀವ್ರತೆ ಧೃಡಪಟ್ಟಿರುತ್ತದೆ. ಈ ರೀತಿ ಇಳುವರಿ ಕುಸಿತ ಕಳೆದ 20 ವರ್ಷಗಳಲ್ಲಿ ಕಂಡುಬಂದಿಲ್ಲವೆಂಬುದು ಸಾರ್ವಜನಿಕ ವಲಯ​ದಿಂದಲೂ ವ್ಯಕ್ತವಾದ ಅಭಿಪ್ರಾಯವಾಗಿದೆ. ಅನೇಕ ರೈತರಿಗೆ ಅಡಿಕೆಗೆ ಬಂದಿರುವ ಎಲೆಚುಕ್ಕೆ ರೋಗ ಹಾಗೂ ತೀವ್ರವಾದ ಇಳುವರಿ ಕುಸಿತದಿಂದ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗದ ಅಸಹಾಯಕತೆಯನ್ನು ವ್ಯಕ್ತಪಡಿಸಿ, ಸಂಘದಿಂದ ಪಡೆದ ಕೃಷಿಯೇತರ ಮಾಧ್ಯಮಿಕ ಸಾಲದ ಕಂತುಗಳನ್ನು ಮುಂದೂಡಿಕೊಡುವಂತೆ ಸಂಘವನ್ನು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಸದಸ್ಯರ ಹಿತದೃಷ್ಟಿಯಿಂದ ಸಾಲದ ಕಂತನ್ನು ಮುಂದೂಡುವ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮಕೃಷ್ಣ ಹೆಗಡೆ ಕಡವೆ ತಿಳಿಸಿದ್ದಾರೆ. ಉತ್ತಮ ಇಳುವರಿ ಬಂದ ವರ್ಷಗಳಲ್ಲಿ ರೈತರು ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿ ಸಹಕರಿಸಿರುತ್ತಾರೆ.ಈ ವರ್ಷ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಹಕಾರ ಸಂಘಗಳು ರೈತರಿಗೆ ನೆರವಾಗಬೇಕಿದೆ. ಇದು ಅನಿವಾರ್ಯವೂ ಆಗಿದೆ. ಕೃಷಿಕರಿಗೆ ಎದುರಾದ ಸಂಕಷ್ಟದಿಂದ ಹೊರಬರಲು ಜೇನು ಕೃಷಿ ಕೈಗೊಳ್ಳಲು ಸಂಘದಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಅಡಿಕೆಯೊಂದಿಗೆ ಮಿಶ್ರ ಬೆಳೆ ಬೆಳೆಯಲು ರೈತರು ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೆ ಪೂರಕ ಸಹಕಾರವನ್ನು ನಮ್ಮ ಸಂಘ ನೀಡಲಿದೆ. – ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಅಧ್ಯಕ್ಷರು, ಟಿಆ‌ರ್ ಸಿ.

Banner Ad
Banner Ad