ಸುದ್ದಿ ಕನ್ನಡ ವಾರ್ತೆ

. ಕಾರವಾರ:ತಾಲೂಕಿನ ಕೈಗಾ 5 ಮತ್ತು 6ನೇ ಘಟಕಕ್ಕೆ ಸಾಗಿಸಲಾಗುತ್ತಿದ್ದ ಬೃಹತ್ ಗಾತ್ರದ ಯಂತ್ರೋಪಕರಣ ಹೊತ್ತ ವಾಹನ ಗುರುವಾರ ಕೈಗಾ ಸಮೀಪದ ಹರ್ಟುಗಾ ಗ್ರಾಮದ ಬಳಿ ಪಲ್ಟಿಯಾದ ಪರಿಣಾಮ ಮಲ್ಲಾಪುರ-ಕೈಗಾ ಸಂಪರ್ಕ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಗುಜರಾತ್‌ನಿಂದ ಕಳೆದ ಫೆಬ್ರುವರಿಯಲ್ಲಿ ಹೊರಟಿದ್ದ ಈ ಭಾರೀ ಯಂತ್ರೋಪಕರಣ ಸಾಗಾಟ ವಾಹನ, ಎ. 15ರಂದು ಕಾರವಾರ ಪ್ರವೇಶಿಸಿತ್ತು. ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಭದ್ರತಾ ಕ್ರಮಗಳೊಂದಿಗೆ ಹಂತ ಹಂತವಾಗಿ ಕೈಗಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ, ಕೈಗಾ ಯೋಜನಾ ಪ್ರದೇಶಕ್ಕೆ ತಲುಪಲು ಇನ್ನೂ ಮೂರ್ನಾಲ್ಕು ಕಿಲೋಮೀಟರ್ ದೂರ ಬಾಕಿ ಇರುವಾಗ ಅವಘಡಕ್ಕೀಡಾಗಿದೆ.
ಹರ್ಟುಗಾ ಗ್ರಾಮದ ಸಮೀಪದ ತಿರುವಿನಲ್ಲಿ ಸಾಗುವ ವೇಳೆ ಭಾರೀ ಗಾತ್ರದ ಯಂತ್ರದ ಭಾಗದ ತೂಕದ ಪರಿಣಾಮ ವಾಹನ ಏಕಾಏಕಿ ಸಮತೋಲನ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಅಡ್ಡವಾಗಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಅವಘಡದಿಂದ ವಾಹನ ರಸ್ತೆ ಪಕ್ಕದಲ್ಲಿ ಅಡ್ಡವಾಗಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನಾ ಸ್ಥಳಕ್ಕೆ ಸಂಬಂಧಿತ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನವನ್ನು ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.ಈ ಯಂತ್ರವನ್ನು ಕೈಗಾ ಅಣುಸ್ಥಾ ವರದಲ್ಲಿ 5 ಮತ್ತು 6 ನೇ ಘಟಕ ದಲ್ಲಿ ವಿಕಿರಣ ರಕ್ಷಾ ಕವಚವನ್ನ ಅಳವಡಿಸಲು ತರಲಾಗುತಿತ್ತು. ಇದರ ಹೊಣೆಯನ್ನ ಐ & ಖಿ ಕಂಪನಿ ನಿರ್ವಹಿಸುತ್ತಿದ್ದು,140 ಟನ್ ಕಂಪನಿಯಿಂದ ತೂಕದ ಯಂತ್ರವನ್ನು ನೆಪ್ರೋಸ್ ಟ್ರಾಸ್ಪೋರ್ಟ್ ದಿಂದ ತರಲಾಗುತಿತ್ತು ಎಂಬ ಮಾಹಿತಿ ಲಭಿಸಿದೆ.