ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮಸ್ಥರು ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ್ದು, ಈ ಕುರಿತು ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕೃಷಿ ಸಮಾಜದ ಅಧ್ಯಕ್ಷರಾದ ಅರುಣ ದೇಸಾಯಿ ಅವರು, “ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯು ಈ ಭಾಗದ ಜನರ ಮೂಲಭೂತ ಹಕ್ಕುಗಳನ್ನು ಕಸಿಯುವ ಯೋಜನೆಯಾಗಿದೆ. ಇದರಿಂದಾಗಿ ಇಲ್ಲಿನ ರೈತರು ಮತ್ತು ಸಾರ್ವಜನಿಕರು ತಮ್ಮ ಸ್ವಂತ ಜಮೀನಿನಲ್ಲಿ ಮುಕ್ತವಾಗಿ ಕೃಷಿ ಚಟುವಟಿಕೆಗಳನ್ನು ನಡೆಸಲು ಹಾಗೂ ಮೂಲಸೌಕರ್ಯಗಳನ್ನು ಪಡೆದುಕೊಳ್ಳಲು ತೀವ್ರ ತೊಂದರೆಯಾಗಲಿದೆ,” ಯಾವುದೇ ಯೋಜನೆ ಮಾಡಬೇಕಾದರೆ ಆ ಭಾಗದ ಜನರನ್ನು ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ಪ್ರಮುಖ ಸಮಸ್ಯೆಗಳು ಕೃಷಿ ಚಟುವಟಿಕೆಗಳಿಗೆ ಅಡ್ಡಿ ಈ ನಿಯಮಗಳ ಕಟ್ಟುನಿಟ್ಟಿನ ಜಾರಿಯಿಂದ ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆಗೆ ಧಕ್ಕೆಯಾಗುವ ಭೀತಿ ಎದುರಾಗಿದೆ.ಇದರಿಂದ ಅಭಿವೃದ್ಧಿ ಕುಂಠಿತವಾಗಿ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳ ವಿಸ್ತರಣೆಗೆ ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗಲಿವೆ.ಜೊತೆಗೆ
ಸ್ಥಳಾಂತರದ ಭೀತಿ ಈ ಘೋಷಣೆಯಿಂದ ಆಗಿದೆ ಭವಿಷ್ಯದಲ್ಲಿ ಗ್ರಾಮಸ್ಥರು ತಮ್ಮ ಹಕ್ಕುಗಳನ್ನು ಕಳೆದುಕೊಂಡು ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಸ್ಥಳೀಯ ಜನರನ್ನು ಸಂಕಷ್ಟಕ್ಕೆ ತಳ್ಳುವ ಈ ಯೋಜನೆಯನ್ನು ಜಾರಿಗೊಳಿಸಬಾರದು ಮತ್ತು ತಕ್ಷಣವೇ ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಗ್ರಾಮಸ್ಥರು ಜಂಟಿಯಾಗಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಉಪತಹಶೀಲ್ದಾರ ಸಂಜೀವ ಭಜಂತ್ರಿ ,ಸುರೇಶ ವಕ್ಕುಂದ, ಜೋಯಿಡಾ ಪಿ ಎಸ್ ಐ ಜಗದೀಶ್ ,ನಂದಿಗದ್ದೆ ಗ್ರಾಮದ ಪ್ರಮುಖರಾದ ಮಂಜುನಾಥ ಭಾಗ್ವತ, ಅಮರ ಭಾಗ್ವತ್ ಸದಾನಂದ ಉಪಾಧ್ಯ, ಸಂಕೇತ ಭಟ್, ನರಸಿಂಹ ಭಾಗ್ವತ್, ಗಂಗಾಧರ ಹೆಗಡೆ, ಬೇಜ್ಮೀ ಫರ್ನಾಂಡಿಸ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು
