ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಆಡಳಿತ ಸೌಧದ (ತಹಶೀಲ್ದಾರ ಕಚೇರಿಯ) ಲಿಫ್ಟ್ ಕಳೆದ ಕೆಲವು ಸಮಯದಿಂದ ಕೆಟ್ಟು ನಿಂತಿದ್ದು, ಕಚೇರಿಗೆ ಬರುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೋಟಿ ಕೋಟಿ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದರೂ,ನಿರ್ವಹಣೆಯ ಕೊರತೆಯಿಂದಾಗಿ ಲಿಫ್ಟ್ ಸೌಲಭ್ಯ ಬಳಕೆಗೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೃದ್ಧರು, ವಿಕಲಚೇತನರಿಗೆ ತೀವ್ರ ಸಂಕಷ್ಟ:
ವಿವಿಧ ಕೆಲಸ ಕಾರ್ಯಗಳಿಗಾಗಿ ತಾಲೂಕಿನ ಮೂಲೆ ಮೂಲೆಗಳಿಂದ ದಿನನಿತ್ಯ ನೂರಾರು ಜನ ಈ ಕಚೇರಿಗೆ ಬರುತ್ತಾರೆ. ಲಿಫ್ಟ್ ಬಂದ್ ಆಗಿರುವುದರಿಂದ ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ವಿಕಲಚೇತನರು ಮೆಟ್ಟಿಲುಗಳನ್ನು ಹತ್ತಿ ಮೇಲಿನ ಮಹಡಿಗಳಿಗೆ ಹೋಗಲು ಕಣ್ಣೀರು ಹಾಕುವಂತಾಗಿದೆ. ತುರ್ತು ಕೆಲಸಗಳಿದ್ದರೂ ಮೇಲಿನ ಮಹಡಿಗೆ ಹೋಗಲಾಗದೇ ಅನೇಕರು ನಿರಾಸೆಯಿಂದ ವಾಪಸ್ ಹೋಗುತ್ತಿರುವ ಉದಾಹರಣೆಗಳೂ ಇವೆ. ಕೂಡಲೇ ಸರಿಪಡಿಸಲು ಸಾರ್ವಜನಿಕರ ಆಗ್ರಹ:”ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಟ್ಟಿದೆ. ಆದರೆ ಸಾರ್ವಜನಿಕರ ಅನುಕೂಲಕ್ಕೆ ಇರಬೇಕಾದ ಲಿಫ್ಟ್ ಮಾತ್ರ ಪ್ರದರ್ಶನದ ವಸ್ತುವಾಗಿದೆ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ,.
ಕೂಡಲೇ ಲಿಫ್ಟ್ ದುರಸ್ತಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು,” ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ತಹಶೀಲ್ದಾರರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
